ದೇಶ

ಈಜಿಪ್ಟ್ ಅಧ್ಯಕ್ಷ ಸಿಸಿ ಜತೆ ಪ್ರಧಾನಿ ಮೋದಿ ಮಾತುಕತೆ, ಐದು ಒಪ್ಪಂದಗಳಿಗೆ ಸಹಿ

Lingaraj Badiger

ನವದೆಹಲಿ: ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸಿರುವ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ, ಭಾರತ ಮತ್ತು ಈಜಿಪ್ಟ್, ರಕ್ಷಣೆ, ಸೈಬರ್ ಭದ್ರತೆ, ವ್ಯಾಪಾರ, ಸಂಸ್ಕೃತಿ, ಮಾಹಿತಿ ತಂತ್ರಜ್ಞಾನ, ಯುವ ವಿಷಯಗಳು ಮತ್ತು ಪ್ರಸಾರ ಕ್ಷೇತ್ರಗಳಲ್ಲಿ ಒಪ್ಪಂದಗಳನ್ನು ಉಭಯ ನಾಯಕರು ವಿನಿಮಯ ಮಾಡಿಕೊಂಡರು.

ಸಿಸಿ ಅವರೊಂದಿಗಿನ ವ್ಯಾಪಕ ಚರ್ಚೆಯ ನಂತರ, ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ, ಭಯೋತ್ಪಾದನೆಯು ಮಾನವೀಯತೆಗೆ ಅತ್ಯಂತ ಗಂಭೀರವಾದ ಭದ್ರತಾ ಬೆದರಿಕೆಯಾಗಿದೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ಕೊನೆಗೊಳಿಸಲು ಕಠಿಣ ಕ್ರಮಗಳ ಅಗತ್ಯವಿದೆ ಎಂದು ಸಿಸಿ ಒಪ್ಪಿಕೊಂಡರು ಎಂದು ಮೋದಿ ತಿಳಿಸಿದ್ದಾರೆ.

ಉಭಯ ನಾಯಕರು ಸಂಸ್ಕೃತಿ, ಐಟಿ, ಸೈಬರ್ ಭದ್ರತೆ, ಯುವ ವಿಷಯಗಳು ಮತ್ತು ಪ್ರಸಾರ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ನೀಡುವ ಐದು ಒಪ್ಪಂದಗಳಿಗೆ ಸಹಿ ಹಾಕಿದರು.

ಮುಂದಿನ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು 12 ಶತಕೋಟಿ ಡಾಲರ್‌ಗೆ ಕೊಂಡೊಯ್ಯಲು ಉಭಯ ನಾಯಕರು ನಿರ್ಧರಿಸಿದ್ದಾರೆ ಎಂದು ಸಿಸಿ ಅವರ ಸಮ್ಮುಖದಲ್ಲಿ ಮೋದಿ ಹೇಳಿದ್ದಾರೆ.

ರಕ್ಷಣಾ ಉದ್ಯಮಗಳ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಮತ್ತು ಭಯೋತ್ಪಾದನಾ ನಿಗ್ರಹ ಮಾಹಿತಿ ಮತ್ತು ಗುಪ್ತಚರ ವಿನಿಮಯವನ್ನು ಹೆಚ್ಚಿಸಲು ಎರಡೂ ರಾಷ್ಟ್ರಗಳು ನಿರ್ಧರಿಸಿವೆ ಎಂದು ಪ್ರಧಾನಿ ಹೇಳಿದರು.

ಈ  ವೇಳೆ ಮಾತನಾಡಿದ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ, ತಮ್ಮ ದೇಶದಲ್ಲಿ ಸಾಕಷ್ಟು ಹೂಡಿಕೆ ಅವಕಾಶಗಳು ಲಭ್ಯವಿರುವುದರಿಂದ ಈಜಿಪ್ಟ್‌ನಲ್ಲಿ ಭಾರತೀಯ ಕಂಪನಿಗಳ ಹೂಡಿಕೆಯನ್ನು ಹೆಚ್ಚಿಸಲು ಚರ್ಚೆ ನಡೆಸಲಾಯಿತು. ವ್ಯಾಪಾರ ಮತ್ತು ಹೂಡಿಕೆ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸುವ ಕುರಿತು ಎರಡೂ ದೇಶಗಳು ಮಾತುಕತೆ ನಡೆಸಿವೆ ಎಂದರು.

SCROLL FOR NEXT