ದೇಶ

ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ: ಜಾಮಿಯಾ ವಿವಿಯಲ್ಲಿ ಭದ್ರತೆ ಹೆಚ್ಚಳ, 4 ವಿದ್ಯಾರ್ಥಿಗಳ ಬಂಧನ

Lingaraj Badiger

ನವದೆಹಲಿ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವುದಾಗಿ ವಿದ್ಯಾರ್ಥಿ ಫೆಡರೇಶನ್ ಆಫ್ ಇಂಡಿಯಾ(ಎಸ್‌ಎಫ್‌ಐ) ಘೋಷಿಸಿದ ನಂತರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಭದ್ರತೆ ಹೆಚ್ಚಿಸಲಾಗಿದೆ. ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ವಿವಿಯ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಕ್ಯಾಂಪಸ್ ನಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡುವುದಿಲ್ಲ ಮತ್ತು ವಿಶ್ವವಿದ್ಯಾಲಯದ ಶಾಂತಿಯುತ ಶೈಕ್ಷಣಿಕ ವಾತಾವರಣವನ್ನು ಹಾಳುಮಾಡಲು ಪಟ್ಟಭದ್ರ ಹಿತಾಸಕ್ತಿಗಳನ್ನು ತಡೆಯಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಜಾಮಿಯಾ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಹೇಳಿದೆ.

ವಿದ್ಯಾರ್ಥಿ ಸಂಘಟನೆಯಿಂದ ಸಂಜೆ 6 ಗಂಟೆಗೆ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರದರ್ಶನಕ್ಕೂ ಕೆಲವೇ ಗಂಟೆಗಳ ಮುನ್ನ ನಾಲ್ವರು ಎಸ್‌ಎಫ್‌ಐ ಸದಸ್ಯರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಈ ಮಧ್ಯೆ ವಿದ್ಯಾರ್ಥಿಗಳ ಬಂಧನದ ವಿರುದ್ಧ ಎಸ್‌ಎಫ್‌ಐ ಸಂಜೆ ಪ್ರತಿಭಟನೆಗೆ ಕರೆ ನೀಡಿದೆ.

ಎಸ್‌ಎಫ್‌ಐನ ಜಾಮಿಯಾ ಘಟಕವು ಎಂಸಿಆರ್‌ಸಿ ಲಾನ್ ಗೇಟ್ ಸಂಖ್ಯೆ 8 ರಲ್ಲಿ ಸಂಜೆ 6 ಗಂಟೆಗೆ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುವುದು ಎಂದು ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.

ವಿವಿಯ ಗೇಟ್ ಮುಂಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ಅಶ್ರುವಾಯು ಹಾಗೂ ಜಲಫಿರಂಗಿ ವಾಹನಗಳು ಸಹ ಸ್ಥಳದಲ್ಲಿ ಮೊಕ್ಕಾಂ ಹೂಡಿವೆ.

SCROLL FOR NEXT