ದೇಶ

ಮಧ್ಯ ಪ್ರದೇಶ: ಸ್ಥಗಿತಗೊಂಡಿದ್ದ ಕಲ್ಲಿದ್ದಲು ಗಣಿ ಪ್ರವೇಶಿಸಿದ ನಾಲ್ವರು ವಿಷಕಾರಿ ಅನಿಲ ಸೇವಿಸಿ ಸಾವು

Lingaraj Badiger

ಶಾಹ್ದೋಲ್: ಮಧ್ಯಪ್ರದೇಶದ ಶಾಹದೋಲ್‌ನಲ್ಲಿ ಕಲ್ಲಿದ್ದಲು ಅಥವಾ ಸ್ಕ್ರ್ಯಾಪ್ ಸಂಗ್ರಹಿಸುವ ಉದ್ದೇಶದಿಂದ ಸ್ಥಗಿತಗೊಂಡಿದ್ದ ಕಲ್ಲಿದ್ದಲು ಗಣಿ ಪ್ರವೇಶಿಸಿದ ನಾಲ್ವರು ವಿಷಕಾರಿ ಅನಿಲ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಜಿಲ್ಲಾ ಕೇಂದ್ರದಿಂದ 28 ಕಿಲೋಮೀಟರ್ ದೂರದಲ್ಲಿರುವ ಧನಪುರಿಯಲ್ಲಿ ಗುರುವಾರ ರಾತ್ರಿ 10 ರಿಂದ 11 ಗಂಟೆಯ ನಡುವೆ ಈ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಕಲ್ಲಿದ್ದಲು ಗಣಿಯಿಂದ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಪ್ರತೀಕ್ ಹೇಳಿದ್ದಾರೆ.

ಮೃತರನ್ನು ಧನಪುರಿ ನಿವಾಸಿಗಳಾದ ರಾಜ್ ಮಹ್ತೋ(20), ಹಜಾರಿ ಕೋಲ್(30), ರಾಹುಲ್ ಕೋಲ್(23) ಮತ್ತು ಕಪಿಲ್ ವಿಶ್ವಕರ್ಮ (21) ಎಂದು ಗುರುತಿಸಲಾಗಿದೆ. 

ಕಳೆದೆರಡು ವರ್ಷಗಳಿಂದ ಈ ಗಣಿಯನ್ನು ಬಂದ್ ಮಾಡಲಾಗಿದೆ. ಒಟ್ಟು ಐವರ ಪೈಕಿ ನಾಲ್ವರು ಗಣಿ ಒಳಗೆ ಹೋಗಿದ್ದಾರೆ. ಹೊರಗೆ ನಿಂತಿದ್ದ ಐದನೇ ವ್ಯಕ್ತಿ ಸ್ವಲ್ಪ ಸಮಯದ ನಂತರ ಒಳಗೆ ಇಣುಕಿ ನೋಡಿದ್ದಾನೆ. ಆದರೆ ತನ್ನ ಸಹಚರರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಂತರ ಐದನೇ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ" ಅವರು ಹೇಳಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಸತತ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಗಣಿ ಒಳಗಿನಿಂದ ನಾಲ್ವರ ಶವಗಳನ್ನು ಹೊರತೆಗೆದಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.

"ಮುಚ್ಚಿದ ಗಣಿಯಿಂದ ಹೊರಹೊಮ್ಮುವ ವಿಷಕಾರಿ ಅನಿಲ ಸೇವಿಸಿ ನಾಲ್ವರು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ" ಎಂದು ಪ್ರತೀಕ್ ಮಾಹಿತಿ ನೀಡಿದ್ದಾರೆ.

SCROLL FOR NEXT