ದೇಶ

ದೇಶದಲ್ಲಿ ಒಡಕು ಮೂಡಿಸುವ ಪ್ರಯತ್ನಗಳಾಗುತ್ತಿವೆ: ಬಿಬಿಸಿ ಸಾಕ್ಷ್ಯಚಿತ್ರದ ವಿರುದ್ಧ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ

Manjula VN

ನವದೆಹಲಿ: ದೇಶದಲ್ಲಿ ಭಿನ್ನಾಭಿಪ್ರಾಯಗಳು ಮತ್ತು ಒಡಕು ಮೂಡಿಸುವ ಪ್ರಯತ್ನಗಳಾಗುತ್ತಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಚ್ಚರಿಸಿದ್ದು, ಅಂತಹ ಪ್ರಯತ್ನಗಳು ಯಾವುದೇ ಕಾರಣಕ್ಕೂ ಸಫಲವಾಗುವುದಿಲ್ಲ ಎಂದು ಹೇಳಿದ್ದಾರೆ.

ಶನಿವಾರ ದೆಹಲಿ ಕಂಟೋನ್ಮೆಂಟ್‌ನ ಕರಿಯಪ್ಪ ಮೈದಾನದಲ್ಲಿ ನಡೆದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಗುಜರಾತ್​ ಗಲಭೆ ಕುರಿತು ಬಿಬಿಸಿ ತಯಾರಿಸಿರುವ ವಿವಾದಾತ್ಮಕ ಸಾಕ್ಷ್ಯಚಿತ್ರವನ್ನು ಉದ್ದೇಶಿಸಿ ಎಚ್ಚರಿಕೆ ನೀಡಿದರು.

ಭಾರತ ತನ್ನ ಭವ್ಯತೆ ಸಾಧಿಸಲು ಇರುವುದೊಂದೇ ಮಂತ್ರ ಅದು ಒಗ್ಗಟ್ಟಿನ ಮಂತ್ರ. ದೇಶದ ಯುವಕ ಕಾರಣದಿಂದ ಇಡೀ ವಿಶ್ವವೇ ಭಾರತದ ಕಡೆ ನೋಡುತ್ತಿದೆ. ನಮ್ಮ ಸರ್ಕಾರ ಡಿಜಿಟಲ್, ಸ್ಟಾರ್ಟ್‌ಅಪ್ ಮತ್ತು ಆವಿಷ್ಕಾರ ಕ್ರಾಂತಿಗಳನ್ನು ಮಾಡಿದ್ದು, ಇದು ಯುವಕರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಭಾರತದ ಯುವಜನತೆಗೆ ಹೊಸ ಅವಕಾಶಗಳ ಸಮಯವಾಗಿದೆ. ಎಲ್ಲೆಲ್ಲೂ ಭಾರತಕ್ಕೆ ಒಳ್ಳೆಯ ಸಮಯ ಬಂದಿದೆ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.

ಬಳಿಕ ಬಿಬಿಸಿಯ ವಿವಾದಾತ್ಮಕ ಸಾಕ್ಷ್ಯಚಿತ್ರವನ್ನು ಹೆಸರು ಹೇಳದೆಯೇ ಟೀಕಿಸಿದ ಅವರು, ದೇಶವನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ. ದೇಶ ಒಡೆಯಲು ಹಲವಾರು ನೆಪಗಳನ್ನು ಸೃಷ್ಟಿಸಲಾಗುತ್ತಿದೆ. ಭಾರತಮಾತೆಯ ಮಕ್ಕಳಲ್ಲಿ ಒಡಕು ಮೂಡಿಸಲು ಹಲವಾರು ವಿವಾದಗಳನ್ನು ಹುಟ್ಟುಹಾಕಲಾಗುತ್ತಿದೆ. ಅಂತಹ ಪ್ರಯತ್ನಗಳ ಹೊರತಾಗಿಯೂ, ಭಾರತದ ಜನರಲ್ಲಿ ಎಂದಿಗೂ ಭಿನ್ನಾಭಿಪ್ರಾಯಗಳು ಉಂಟಾಗುವುದಿಲ್ಲ. ಏಕತೆಯ ಮಂತ್ರವು ಪ್ರತಿಜ್ಞೆ ಮತ್ತು ಭಾರತದ ಶಕ್ತಿಯಾಗಿದೆ. ಭಾರತವು ಭವ್ಯತೆಯನ್ನು ಸಾಧಿಸುವ ಏಕೈಕ ಮಾರ್ಗವಾಗಿದೆ ಎಂದು ತಿಳಿಸಿದರು.

SCROLL FOR NEXT