ದೇಶ

ಭಾರತ್ ಜೋಡೋ ಯಾತ್ರೆ ಚುನಾವಣೆ ಗೆಲ್ಲುವುದಕ್ಕಲ್ಲ, ಭಾರತವನ್ನು ಒಗ್ಗೂಡಿಸಲು: ಮಲ್ಲಿಕಾರ್ಜುನ್ ಖರ್ಗೆ

Vishwanath S

ಶ್ರೀನಗರ: ಭಾರತ್ ಜೋಡೋ ಯಾತ್ರೆ ಚುನಾವಣೆ ಗೆಲ್ಲಲು ಅಥವಾ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲು ಕೈಗೊಂಡಿಲ್ಲ, ಆದರೆ ದ್ವೇಷದ ವಿರುದ್ಧ ಧ್ವನಿ ಎತ್ತಲು. ದೇಶವನ್ನು ಒಗ್ಗೂಡಿಸಲು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಸಮಾರೋಪ ಸಮಾರಂಭ ಕಾರ್ಯಕ್ರಮ ಭಾರೀ ಹಿಮಪಾತದ ನಡುವೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ ಅವರು, ಬಿಜೆಪಿಯವರು ದೇಶದಲ್ಲಿ ದ್ವೇಷವನ್ನು ಹರಡುತ್ತಿದ್ದಾರೆ. ನಿರುದ್ಯೋಗ ಮತ್ತು ಹಣದುಬ್ಬರದಂತಹ ವಿಷಯಗಳಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ದೇಶವನ್ನು ಒಗ್ಗೂಡಿಸಬಹುದು ಎಂದು ರಾಹುಲ್ ಗಾಂಧಿ ಈ ಯಾತ್ರೆ ಮೂಲಕ ಸಾಬೀತುಪಡಿಸಿದ್ದಾರೆ ಎಂದು ಖರ್ಗೆ ಹೇಳಿದರು.

ಅಲ್ಲದೆ ಪ್ರಧಾನಿ ನರೇಂದ್ರ ಮೋದಿ, ಆರೆಸ್ಸೆಸ್ ಮತ್ತು ಬಿಜೆಪಿ ದೇಶದಲ್ಲಿ ಬಡವರು-ಶ್ರೀಮಂತರ ವಿಭಜನೆಯನ್ನು ವಿಸ್ತರಿಸುವ ನೀತಿಯನ್ನು ಅನುಸರಿಸುತ್ತಿವೆ ಎಂದು ಖರ್ಗೆ ಆರೋಪಿಸಿದರು.

ಪ್ರಧಾನಿ ಮೋದಿಜಿ, ಆರ್‌ಎಸ್‌ಎಸ್ ಮತ್ತು ಬಿಜೆಪಿ ಬಡವರನ್ನು ಬಡವರನ್ನು ಮತ್ತು ಶ್ರೀಮಂತರನ್ನು, ಶ್ರೀಮಂತರನ್ನಾಗಿ ಮಾಡಲು ಬಯಸುತ್ತವೆ. ಶೇಕಡಾ 10 ರಷ್ಟು ಜನರು ದೇಶದ ಶೇಕಡಾ 72 ರಷ್ಟು ಸಂಪತ್ತನ್ನು ಲೂಟಿ ಮಾಡುತ್ತಿದ್ದರೆ ಶೇಕಡಾ 50 ರಷ್ಟು ಜನರು ಕೇವಲ ಶೇಕಡಾ ಮೂರರಷ್ಟು ಹೊಂದಿದ್ದಾರೆ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, 'ದೇಶದಲ್ಲಿ ನಡೆಯುತ್ತಿರುವ ರಾಜಕೀಯ ದೇಶಕ್ಕೆ ಒಳ್ಳೆಯದಾಗಲು ಸಾಧ್ಯವಿಲ್ಲ ಎಂದು ನಾನು ಇಲ್ಲಿ ನಿಂತು ಹೇಳಬಲ್ಲೆ. ಒಡೆದು ಆಳುವ ರಾಜಕಾರಣ ದೇಶದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಒಂದು ರೀತಿಯಲ್ಲಿ, ಇದು ಆಧ್ಯಾತ್ಮಿಕ ಪ್ರಯಾಣವಾಗಿತ್ತು. ನನ್ನ ಸಹೋದರ ಕಾಶ್ಮೀರಕ್ಕೆ ಬರುತ್ತಿದ್ದಾಗ, ಅವನು ನನ್ನ ತಾಯಿ ಮತ್ತು ನನಗೆ ಸಂದೇಶವನ್ನು ಕಳುಹಿಸಿದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಾಯಿತು. ಭಾರತ ಜೋಡೋ ಯಾತ್ರಾ ಸ್ಮಾರಕವನ್ನು ಅನಾವರಣಗೊಳಿಸಲಾಗಿದೆ. ಸಮಾರೋಪ ಸಮಾರಂಭವನ್ನು ಶೇರ್-ಎ-ಕಾಶ್ಮೀರ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಈ ಸಾರ್ವಜನಿಕ ಸಭೆಗೆ 23 ವಿರೋಧ ಪಕ್ಷಗಳ ನಾಯಕರನ್ನು ಆಹ್ವಾನಿಸಲಾಗಿದೆ. ಈ ಪ್ರದೇಶದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

SCROLL FOR NEXT