ದೇಶ

ಬಿಜಾಪುರ ಎನ್‌ಕೌಂಟರ್ ಪ್ರಕರಣದಲ್ಲಿ ಬೇಕಾಗಿದ್ದ ಮಹಿಳಾ ಮಾವೋವಾದಿಯನ್ನು ಬಂಧಿಸಿದ ಎನ್‌ಐಎ

Ramyashree GN

ನವದೆಹಲಿ: 2021ರಲ್ಲಿ 22 ಪೊಲೀಸರ ಸಾವಿಗೆ ಮತ್ತು 30ಕ್ಕೂ ಹೆಚ್ಚು ಸಿಬ್ಬಂದಿಗೆ ಗಾಯಗಳಿಗೆ ಕಾರಣವಾದ ಛತ್ತೀಸ್‌ಗಢದ ಬಿಜಾಪುರ ಎನ್‌ಕೌಂಟರ್ ಪ್ರಕರಣದಲ್ಲಿ ಮಹಿಳಾ ಮಾವೋವಾದಿ ಕೇಡರ್ ಅನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ ಎಂದು ಸಂಸ್ಥೆ ಸೋಮವಾರ ತಿಳಿಸಿದೆ.

ಬಿಜಾಪುರ ಜಿಲ್ಲೆಯ ತರ್ರೆಮ್ ಪೊಲೀಸ್ ಠಾಣೆ ವ್ಯಾಪ್ತಿಯ ಟೇಕಲ್ಗುಡಿಯಂ ಗ್ರಾಮದಲ್ಲಿ ಎನ್‌ಕೌಂಟರ್ ನಡೆದಿತ್ತು. ಆರಂಭದಲ್ಲಿ ತರ್ರೆಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ತನಿಖೆಯನ್ನು ಎನ್ಐಎ ವಹಿಸಿಕೊಂಡಿತು.

ತನಿಖೆಯ ವೇಳೆ, ಬಿಜಾಪುರ ಜಿಲ್ಲೆಯ ಭೋಪಾಲ್‌ಪಟ್ಟಣಂ ಪ್ರದೇಶದಲ್ಲಿ ಮಹಿಳಾ ಮಾವೋವಾದಿಯೊಬ್ಬರು ತಲೆಮರೆಸಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಲಭಿಸಿದೆ. ತಕ್ಷಣವೇ, ರಾಯ್‌ಪುರದಿಂದ ಎನ್‌ಐಎ ತಂಡವನ್ನು ಕಾರ್ಯಾಚರಣೆಗೆ ನಿಯೋಜಿಸಲಾಯಿತು. ಬಳಿಕ ಈ ಪ್ರಕರಣದಲ್ಲಿ ಬೇಕಾಗಿದ್ದ ಮಹಿಳಾ ಮಾವೋವಾದಿಯನ್ನು ಯಶಸ್ವಿಯಾಗಿ ಬಂಧಿಸಲಾಯಿತು ಎಂದು ಅಧಿಕಾರಿ ಹೇಳಿದರು.

ಮಹಿಳಾ ಕೇಡರ್ ಅನ್ನು ಮಡ್ಕಮ್ ಉಂಗಿ ಅಲಿಯಾಸ್ ಕಮಲ ಎಂದು ಗುರುತಿಸಲಾಗಿದೆ. ಆಕೆಯನ್ನು ಜಗದಲ್‌ಪುರದ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು ನಂತರ ಕಸ್ಟಡಿಗೆ ಕಳುಹಿಸಲಾಯಿತು.

ಸದ್ಯ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT