ದೇಶ

ಮಹಾರಾಷ್ಟ್ರ: ಅಜಿತ್ ಪವಾರ್- ದೇವೇಂದ್ರ ಫಡ್ನವಿಸ್ ಭೇಟಿ, ಖಾತೆಗಳ ಹಂಚಿಕೆ ಕುರಿತು ಚರ್ಚೆ

Ramyashree GN

ಮುಂಬೈ: ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಬೆಂಬಲ ಘೋಷಿಸಿದ ಒಂದು ದಿನದ ನಂತರ, ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೋಮವಾರ ತಮ್ಮ ಸಹವರ್ತಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿ, ಖಾತೆ ಹಂಚಿಕೆ ಮತ್ತು ಹೊಸ ಮೈತ್ರಿಗೆ ಸಂಬಂಧಿಸಿದ ಕಾನೂನು ಅಂಶಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಪ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಫಡ್ನವಿಸ್ ಅವರ ಅಧಿಕೃತ ನಿವಾಸ ‘ಮೇಘದೂತ್’ ಬಂಗಲೆಯಲ್ಲಿ ನಡೆದ ಸಭೆಯಲ್ಲಿ ಎನ್‌ಸಿಪಿ ನಾಯಕರಾದ ಸುನೀಲ್ ತಟ್ಕರೆ, ಪ್ರಫುಲ್ ಪಟೇಲ್ ಮತ್ತು ಛಗನ್ ಭುಜಬಲ್ ಕೂಡ ಉಪಸ್ಥಿತರಿದ್ದರು. ಸುಮಾರು ಒಂದು ಗಂಟೆ ಕಾಲ ಸಭೆ ನಡೆಯಿತು.

ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ತನ್ನ ಬೆಂಬಲಿಗ ಶಾಸಕರ ಜೊತೆ ಸೇರಿ ಶಿವಸೇನಾ (ಶಿಂದೆ ಬಣ)-ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಭಾನುವಾರ ಮಧ್ಯಾಹ್ನ ಉಪಮುಖ್ಯಮಂತ್ರಿಯಾಗಿ, ಇತರ ಎಂಟು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಸಭೆಯಲ್ಲಿ ಖಾತೆಗಳ ಹಂಚಿಕೆಯ ಬಗ್ಗೆ ಚರ್ಚೆ ನಡೆಸಲಾಗಿದ್ದು, ಎನ್‌ಸಿಪಿ, ಬಿಜೆಪಿ ಮತ್ತು ಶಿವಸೇನೆಯ ಹೊಸ ಮೈತ್ರಿ ಕುರಿಕು ಕಾನೂನು ಅಂಶಗಳು ಮತ್ತು ಮುಂಬರುವ ಸವಾಲುಗಳ ಬಗ್ಗೆಯೂ ನಾಯಕರು ಚರ್ಚಿಸಿದ್ದಾರೆ ಎಂದು ಅಜಿತ್ ಪವಾರ್ ಅವರ ಆಪ್ತ ಮೂಲಗಳು ತಿಳಿಸಿವೆ.

ಮಂಗಳವಾರ ಸಂಜೆಯೊಳಗೆ ಖಾತೆ ಹಂಚಿಕೆಯನ್ನು ಅಂತಿಮಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ, ಅಜಿತ್ ಪವಾರ್ ಅವರು ಜಲಸಂಪನ್ಮೂಲ, ವಿದ್ಯುತ್ ಮತ್ತು ಹಣಕಾಸು ಖಾತೆಗಳನ್ನು ಹೊಂದಿದ್ದರು. ಸದ್ಯ ಎಲ್ಲಾ ಮೂರು ಖಾತೆಗಳು ಫಡ್ನವಿಸ್ ಅವರ ಬಳಿ ಇವೆ. ಅವರು ರಾಜ್ಯ ಗೃಹ ಇಲಾಖೆಯ ಉಸ್ತುವಾರಿಯನ್ನೂ ಹೊಂದಿದ್ದಾರೆ.
ಮುಂದಿನ ರಾಜ್ಯ ಸಚಿವ ಸಂಪುಟ ಸಭೆ ಬುಧವಾರ ನಡೆಯುವ ಸಾಧ್ಯತೆ ಇದೆ.

SCROLL FOR NEXT