ದೇಶ

ಪಾಕ್ ಪ್ರಧಾನಿ ಸಮ್ಮುಖದಲ್ಲೇ ಭಯೋತ್ಪಾದನೆ ಬೆಂಬಲಿಸುವ ದೇಶಗಳನ್ನು ಖಂಡಿಸಬೇಕು ಎಂದ ಪ್ರಧಾನಿ ಮೋದಿ

Lingaraj Badiger

ನವದೆಹಲಿ: ಉಗ್ರ ಚಟುವಟಿಕೆಗಳ ವಿರುದ್ಧ ಹೋರಾಡುವ ವಿಚಾರದಲ್ಲಿ ಯಾವುದೇ ದ್ವಂದ್ವ ನೀತಿ ಹೊಂದಿರಬಾರದು ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುವ ದೇಶಗಳನ್ನು ಟೀಕಿಸಲು ಹಿಂಜರಿಯಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪಾಕಿಸ್ತಾನ ಪ್ರಧಾನಿ ಭಾಗಿಯಾಗಿದ್ದ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ)ಯ ಶೃಂಗ ಸಭೆಯಲ್ಲಿ ಹೇಳಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾಗಿಯಾಗಿದ್ದ ಎಸ್‌ಸಿಒ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ನೀಡುವವರ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಭಯೋತ್ಪಾದನೆಯು ಪ್ರಾದೇಶಿಕ ಮತ್ತು ಜಾಗತಿಕ ಶಾಂತಿಗೆ ದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ. ಈ ಬೆದರಿಕೆಯನ್ನು ಎದುರಿಸಲು ಪರಸ್ಪರ ಸಹಕಾರ ನೀಡಬೇಕು ಎಂದು ಮೋದಿ ಕರೆ ನೀಡಿದರು.

ಭಯೋತ್ಪಾದನೆಯ ವಿರುದ್ಧ ನಾವು ಒಟ್ಟಾಗಿ ಹೋರಾಡಬೇಕು. ಅದು ಯಾವುದೇ ರೂಪದಲ್ಲಿ ಮತ್ತು ಯಾವುದೇ ಅಭಿವ್ಯಕ್ತಿಯಾಗಿರಬಹುದು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಯಾವುದೇ ದ್ವಂದ್ವ ನೀತಿ ಇರಬಾರದು ಎಂದು ಮೋದಿ ಪ್ರತಿಪಾದಿಸಿದರು.

ನಾವು ಎಸ್‌ಸಿಒ ಅನ್ನು ವಿಸ್ತೃತ ನೆರೆಹೊರೆಯಾಗಿ ನೋಡುವುದಿಲ್ಲ, ಬದಲಿಗೆ ವಿಸ್ತೃತ ಕುಟುಂಬವಾಗಿ ನೋಡುತ್ತೇವೆ. ಭದ್ರತೆ, ಆರ್ಥಿಕ ಅಭಿವೃದ್ಧಿ, ಸಂಪರ್ಕ, ಏಕತೆ, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ, ಮತ್ತು ಪರಿಸರ ಸಂರಕ್ಷಣೆ ಎಸ್​​ಸಿಒ ಬಗ್ಗೆ ನಮ್ಮ ಗುರಿಗಳ ಆಧಾರಸ್ತಂಭಗಳಾಗಿವೆ ಪ್ರಧಾನಿ ಮೋದಿ ಹೇಳಿದ್ದಾರೆ.

ಭಾರತದ ಅಧ್ಯಕ್ಷತೆಯಲ್ಲಿ ನಡೆದ ವರ್ಚುವಲ್ ಶೃಂಗಸಭೆಯಲ್ಲಿ ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ಇರಾನ್ ನಾಯಕರು ಸಹ ಭಾಗವಹಿಸಿದ್ದರು.

SCROLL FOR NEXT