ಮುಂಬೈ/ರಣಜಿ: ವಾಣಿಜ್ಯ ನಗರಿ ಮುಂಬೈನಲ್ಲಿ ಕಳೆದ ರಾತ್ರಿಯಿಡೀ ಸಾಧಾರಣದಿಂದ ಕೂಡಿದ ಭಾರೀ ಮಳೆ ಸುರಿದಿದ್ದು, ಹವಾಮಾನ ಇಲಾಖೆಯು 'ಆರೆಂಜ್' ಅಲರ್ಟ್ ಘೋಷಿಸಿದೆ. ಸ್ಥಳೀಯ ನಾಗರಿಕ ಸಂಸ್ಥೆ ಪ್ರಕಾರ ಇಂದು ಮತ್ತಷ್ಟು ಮಳೆಯಾಗುವ ಮುನ್ಸೂಚನೆ ನೀಡಿದೆ.
ಬೃಹನ್‌ಮುಂಬೈ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್‌ಪೋರ್ಟ್ (ಬೆಸ್ಟ್) ಸಂಸ್ಥೆಯ ಅಧಿಕಾರಿಯೊಬ್ಬರು, ಬೆಳಿಗ್ಗೆ 4.45 ರ ಸುಮಾರಿಗೆ ಜಲಾವೃತಗೊಂಡ ಕಾರಣ ಕೆಲವು ಬಸ್ ಸಂಚಾರ ಮಾರ್ಗಗಳನ್ನು ಸಿಯಾನ್‌ನಲ್ಲಿ ತಿರುಗಿಸಲಾಗಿದೆ ಎಂದು ಹೇಳಿದರು.
ಬೆಳಗ್ಗೆ 8 ಗಂಟೆಗೆ ಮಾರ್ಗಗಳನ್ನು ಪುನಃಸ್ಥಾಪಿಸಲಾಯಿತು. ನಗರದಲ್ಲಿ ಬಸ್ ಸೇವೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು. ಕಳೆದ ಮಧ್ಯರಾತ್ರಿ ನಂತರ ಮಳೆಯ ತೀವ್ರತೆಯು ಹೆಚ್ಚಾಗಿದ್ದು, ದಾದರ್, ಮಾಹಿಮ್, ಖಾರ್, ಮಾಟುಂಗಾ ಮತ್ತು ಕುರ್ಲಾಗಳಂತಹ ಕೆಲವು ಪ್ರದೇಶಗಳಲ್ಲಿ ಕಳೆದ 12 ಗಂಟೆಗಳಲ್ಲಿ 40 ಎಂಎಂ ನಿಂದ 70 ಮಿಮೀ ವ್ಯಾಪ್ತಿಯಲ್ಲಿ ಮಳೆ ದಾಖಲಾಗಿದೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಮಾಹಿತಿ ನೀಡಿದೆ.
ಭಾರತೀಯ ಹವಾಮಾನ ಇಲಾಖೆ ಗೋವಾದಲ್ಲಿ 'ರೆಡ್' ಅಲರ್ಟ್ ಘೋಷಿಸಿದ್ದು, ಕರಾವಳಿ ರಾಜ್ಯದ ಎರಡೂ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಇಂದು ಭಾರೀ ಮಳೆಯಾಗುವ ಮುನ್ಸೂಚನೆ ಇದೆ.
ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗುವುದು, ದುರ್ಬಲವಾದ ಮರಗಳು, ಕಟ್ಟಡಗಳು ಬೀಳುವುದು, ಅಗತ್ಯ ಸೇವೆಗಳ ಸ್ಥಳೀಯ ಮತ್ತು ಅಲ್ಪಾವಧಿಯ ಅಡ್ಡಿ ಮತ್ತು ತೀವ್ರವಾದ ಮಳೆಯ ಸಮಯದಲ್ಲಿ ಕಡಿಮೆ ಗೋಚರತೆ ಉಂಟಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಯಾವುದೇ ಪ್ರವಾಹದ ಸಂದರ್ಭದಲ್ಲಿ ಜನರು ಸಂಪರ್ಕಿಸಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಉತ್ತರ ಗೋವಾ ಮತ್ತು ದಕ್ಷಿಣ ಗೋವಾ ಜಿಲ್ಲೆಗಳಲ್ಲಿ ತಲಾ ಒಂದರಂತೆ ಎರಡು ವಿಭಿನ್ನ ಸಹಾಯವಾಣಿಗಳು ಮತ್ತು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿದೆ.
ಗೋವಾದಲ್ಲಿ ಭಾರೀ ಮಳೆಯಾಗುತ್ತಿದೆ. ಜನರು ಪ್ರವಾಹ ಪೀಡಿತ ಪ್ರದೇಶಗಳಿಗೆ ಹೋಗದಂತೆ ಸೂಚಿಸಲಾಗಿದೆ. ಯಾವುದೇ ತುರ್ತು ಸಂದರ್ಭದಲ್ಲಿ ನಿಯಂತ್ರಣ ಕೊಠಡಿಗಳನ್ನು ಸಂಪರ್ಕಿಸಿ ಎಂದು ಪ್ರಾಧಿಕಾರ ತಿಳಿಸಿದೆ.
ಉತ್ತರ ಗೋವಾ ಮತ್ತು ದಕ್ಷಿಣ ಗೋವಾದಲ್ಲಿ 40 ರಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು IMD ತಿಳಿಸಿದೆ. ಪ್ರತ್ಯೇಕ ಸ್ಥಳಗಳು ಮತ್ತು ಘಾಟ್ ಪ್ರದೇಶಗಳಲ್ಲಿ ದೀರ್ಘಾವಧಿಯ ಮಳೆ ಬೀಳಬಹುದು ಎಂದು ಹೇಳಲಾಗಿದೆ.