ಅಲ್ಪಸಂಖ್ಯಾತ ಯುವಕನ ಮೇಲೆ ಹಲ್ಲೆ ನಡೆಸಿ ಪಾದ ನೆಕ್ಕುವಂತೆ ಒತ್ತಾಯ: ಹೊಸ ವಿಡಿಯೋ ವೈರಲ್, ಇಬ್ಬರು ಆರೋಪಿಗಳ ಬಂಧನ
ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ, ಒಬಿಸಿ ಯುವಕನ ಪಾದ ನೆಕ್ಕುವಂತೆ ಒತ್ತಾಯಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಗ್ವಾಲಿಯರ್ ಜಿಲ್ಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ ಎನ್ನಲಾಗಿದೆ.
ಭೋಪಾಲ್: ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ್ದ ಆಘಾತಕಾರಿ ವಿಡಿಯೋ ವೈರಲ್ ಆದ ಕೇವಲ ನಾಲ್ಕು ದಿನಗಳ ನಂತರ, ಇದೀಗ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ, ಒಬಿಸಿ ಯುವಕನ ಪಾದ ನೆಕ್ಕುವಂತೆ ಒತ್ತಾಯಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಗ್ವಾಲಿಯರ್ ಜಿಲ್ಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ ಎನ್ನಲಾಗಿದೆ.
ಚಲಿಸುತ್ತಿರುವ ಕಾರೊಂದರಲ್ಲಿ ಅಲ್ಪಸಂಖ್ಯಾತ ಸಮುದಾಯದ ಯುವಕ ಮೊಹ್ಸಿನ್ ಅಲಿಯಾಸ್ ಮಂತ್ರಿ ಖಾನ್ ಮೇಲೆ ಮೂರ್ನಾಲ್ಕು ಜನರು ಹಲ್ಲೆ ನಡೆಸುತ್ತಿರುವುದು ಮತ್ತು ಅವರಲ್ಲಿ ಒಬ್ಬನ ಕಾಲಿನ ಪಾದ ನೆಕ್ಕುವಂತೆ ಹೇಳುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಈ ವಿಡಿಯೋದಲ್ಲಿ ಆರೋಪಿಗಳೆಲ್ಲರೂ (ಒಬಿಸಿ ಗುರ್ಜಾರ್ ಸಮುದಾಯಕ್ಕೆ ಸೇರಿದವರು) ಮೊಹ್ಸಿನ್ ಖಾನ್ ಸಮುದಾಯ ಹಾಗೂ ತಾಯಿಯನ್ನು ನಿಂದಿಸುತ್ತಿರುವುದು ಸಹ ವಿಡಿಯೋದಲ್ಲಿದೆ.
ಇದನ್ನೂ ಓದಿ: ಮೂತ್ರ ವಿಸರ್ಜನೆ ಪ್ರಕರಣ: ಮಧ್ಯಪ್ರದೇಶದ ಸಿಎಂ ಕಾಲು ತೊಳೆದ ನಂತರ ಸಂತ್ರಸ್ತನನ್ನು ಶುದ್ಧೀಕರಿಸಿದ ಕಾಂಗ್ರೆಸ್ಸಿಗರು
ಜೂನ್ 23 ರಂದು ಈ ಘಟನೆ ನಡೆದಿದ್ದು, 42 ಸೆಕೆಂಡುಗಳ ವೀಡಿಯೊವನ್ನು ಗ್ವಾಲಿಯರ್ ನಗರದಲ್ಲಿ ಚಲಿಸುವ ಕಾರಿನೊಳಗೆ ಚಿತ್ರೀಕರಿಸಲಾಗಿದೆ. ಈ ಸಂಬಂಧ ಪ್ರಮುಖ ಆರೋಪಿ ಮತ್ತು ಅವನ ಆಪ್ತ ಸಹಾಯಕ ಸುದೀಪ್ ಸೇರಿದಂತೆ ಇಬ್ಬರನ್ನು ಪೊಲೀಸು ಬಂಧಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳಾದ ಅಮಿತ್ ಗುರ್ಜಾರ್ ಮತ್ತು ತೇಜಿಂದರ್ ಗುರ್ಜಾರ್ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ನಾಲ್ವರ ವಿರುದ್ಧ ಐಪಿಸಿ ಸೆಕ್ಷನ್ 365, 294, 323 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಗ್ವಾಲಿಯರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಸಿಂಗ್ ಚಂದೇಲ್ ತಿಳಿಸಿದ್ದಾರೆ.