ದೇಶ

ಜುಲೈ 18 ರಂದು ಎನ್‌ಡಿಎ ಸಭೆ: ಚಿರಾಗ್ ಪಾಸ್ವಾನ್‌ಗೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಆಹ್ವಾನ

Lingaraj Badiger

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಸೋಲಿಸಲು ಪ್ರತಿಪಕ್ಷಗಳು ಒಂದಾಗಲು ತೀವ್ರ ಪ್ರಯತ್ನ ನಡೆಸುತ್ತಿರುವ ನಡುವೆಯೇ ಕೇಸರಿ ಪಕ್ಷ ಸಹ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.

ಜುಲೈ 18ರಂದು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್ ಡಿಎ)ದ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಭಾಗವಹಿಸುವಂತೆ ಲೋಕ ಜನಶಕ್ತಿ ಪಕ್ಷ(ರಾಮ್‌ವಿಲಾಸ್)ದ ನಾಯಕ ಚಿರಾಗ್ ಪಾಸ್ವಾನ್ ಅವರಿಗೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಆಹ್ವಾನ ನೀಡಿದ್ದಾರೆ.

ಕೇಂದ್ರ ಸಚಿವ ನಿತ್ಯಾನಂದ ರೈ ಅವರು ಶುಕ್ರವಾರ ರಾತ್ರಿ ಒಂದು ವಾರದಲ್ಲಿ ಎರಡನೇ ಬಾರಿಗೆ ಪಾಸ್ವಾನ್ ಅವರನ್ನು ಭೇಟಿಯಾಗಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಯುವ ನಾಯಕ ಚಿರಾಗ್ ಪಾಸ್ವಾನ್ ಅವರಿಗೆ ಪತ್ರ ಬರೆದಿದ್ದು, ಎನ್‌ಡಿಎ ಸಭೆಯಲ್ಲಿ ಭಾಗವಹಿಸಲು ಆಹ್ವಾನಿಸಿದ್ದಾರೆ.

2020ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ವಿರೋಧಿಸಿ ಬಿಹಾರದಲ್ಲಿ ಎನ್ ಡಿಎ ಮೈತ್ರಿ ಮುರಿದುಕೊಂಡಿದ್ದ, ದಿವಂಗತ ದಲಿತ ನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ಅವರನ್ನು ಮತ್ತೆ ಎನ್ ಡಿಎ ತೆಕ್ಕೆಗೆ ತರಲು ಬಿಜೆಪಿ ತೀವ್ರ ಪ್ರಯತ್ನ ನಡೆಸುತ್ತಿದೆ.

SCROLL FOR NEXT