ದೇಶ

ಅಮಿತ್ ಶಾ, ಜೆಪಿ ನಡ್ಡಾ ಭೇಟಿ ಬಳಿಕ ಎನ್‌ಡಿಎ ಸೇರಿದ ಚಿರಾಗ್ ಪಾಸ್ವಾನ್

Lingaraj Badiger

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ನಂತರ ಲೋಕ ಜನಶಕ್ತಿ ಪಕ್ಷದ(ರಾಮ್ ವಿಲಾಸ್) ನಾಯಕ ಚಿರಾಗ್ ಪಾಸ್ವಾನ್ ಅವರು ಸೋಮವಾರ ಸಂಜೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‌ಡಿಎ)ಗೆ ಸೇರ್ಪಡೆಗೊಂಡರು.

ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ ನಂತರ ಟ್ವೀಟ್ ಮಾಡಿದ ಚಿರಾಗ್, "ಮೈತ್ರಿಗೆ ಸಂಬಂಧಿಸಿದ ವಿಷಯದ ಬಗ್ಗೆ ದೆಹಲಿಯಲ್ಲಿ ದೇಶದ ಗೃಹ ಸಚಿ ಅಮಿತ್ ಶಾ ಅವರೊಂದಿಗೆ ಸಕಾರಾತ್ಮಕ ಚರ್ಚೆ ನಡೆಸಿದೆ" ಎಂದು ತಿಳಿಸಿದ್ದಾರೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ವಿರೋಧಿಸಿ 2020ರ ಬಿಹಾರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚಿರಾಗ್ ಪಾಸ್ವಾನ್ ಅವರು ಎನ್‌ಡಿಎದಿಂದ ಹೊರ ನಡೆದಿದ್ದರು. ಆದರೆ, ಪ್ರಮುಖ ವಿಷಯಗಳಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದರು.

ಚಿರಾಗ್ ಅವರನ್ನು ಮತ್ತೆ ಎನ್ ಡಿಎ ತೆಕ್ಕೆಗೆ ತರಲು ಬಿಜೆಪಿ ತೀವ್ರ ಪ್ರಯತ್ನ ನಡೆಸಿತ್ತು. ಸ್ವತಃ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರೇ ಚಿರಾಗ್ ಪಾಸ್ವಾನ್ ಅವರಿಗೆ ಪತ್ರ ಬರೆದು ಎನ್ ಡಿಎ ಸಭೆಗೆ ಆಹ್ವಾನ ನೀಡಿದ್ದರು ಮತ್ತು ಎಲ್‌ಜೆಪಿ (ರಾಮ್ ವಿಲಾಸ್) ಎನ್ ಡಿಎನ ಪ್ರಮುಖ ಮಿತ್ರ ಪಕ್ಷ ಎಂದು ಬಣ್ಣಿಸಿದ್ದರು. ಅಲ್ಲದೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಶುಕ್ರವಾರ ಸಂಜೆ ಚಿರಾಗ್ ಅವರನ್ನು ಎರಡನೇ ಬಾರಿ ಭೇಟಿಯಾಗಿ ಕೇಂದ್ರದ ಎನ್‌ಡಿಎ ಸರ್ಕಾರಕ್ಕೆ ಸೇರುವಂತೆ ಆಹ್ವಾನಿಸಿದ್ದರು.

SCROLL FOR NEXT