ದೇಶ

ಮುಂಗಾರು ಅಧಿವೇಶನ: ಜುಲೈ 19 ರಂದು ಸರ್ವಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ

Lingaraj Badiger

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 20 ರಂದು ಪ್ರಾರಂಭವಾಗಲಿದ್ದು, ಕೇಂದ್ರ ಸರ್ಕಾರ ಬುಧವಾರ ಸರ್ವಪಕ್ಷ ಸಭೆ ಕರೆದಿದೆ.

ಸಂಸತ್ ಅಧಿವೇಶನ ಆರಂಭಕ್ಕೂ ಮುನ್ನ ರೂಢಿಯಲ್ಲಿರುವ ಈ ಸರ್ವಪಕ್ಷ ಸಭೆಯಲ್ಲಿ ಮುಂಗಾರು ಅಧಿವೇಶನಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.

ಅಧಿವೇಶನದಲ್ಲಿ ಸುಗಮ ಕಲಾಪಕ್ಕೆ ಕೇಂದ್ರ ಸರ್ಕಾರ, ಪ್ರತಿಪಕ್ಷಗಳ ಸಹಕಾರ ಕೋರುವ ಸಾಧ್ಯತೆ ಇದೆ. ಈ ಬಾರಿ ಮಣಿಪುರ ಹಿಂಸಾಚಾರ, ದೆಹಲಿ ಸುಗ್ರೀವಾಜ್ಞೆ ಮತ್ತು ಇತರ ಹಲವು ವಿಷಯಗಳ ಬಗ್ಗೆ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಏತನ್ಮಧ್ಯೆ, ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಮಂಗಳವಾರ ಕರೆದಿದ್ದ ಇದೇ ರೀತಿಯ ಸರ್ವಪಕ್ಷ ಸಭೆಯನ್ನು, ಹಲವು ಪಕ್ಷಗಳ ನಾಯಕರು ಲಭ್ಯವಿಲ್ಲದ ಕಾರಣ ಮುಂದೂಡಲಾಗಿದೆ.

ಬೆಂಗಳೂರಿನಲ್ಲಿ ವಿರೋಧ ಪಕ್ಷಗಳು ಸಭೆ ನಡೆಸುತ್ತಿದ್ದರೆ, ಆಡಳಿತಾರೂಢ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ರಾಷ್ಟ್ರ ರಾಜಧಾನಿಯಲ್ಲಿ ಸಭೆ ನಡೆಸುತ್ತಿದೆ.

SCROLL FOR NEXT