ಶ್ರೀನಗರ: ಜಮ್ಮು-ಕಾಶ್ಮೀರದ ಕಥುವಾದಲ್ಲಿ ಧಾರಾಕಾರ ಮಳೆಯ ಪರಿಣಾಮ ಭೂಕುಸಿತ ಉಂಟಾಗಿ ಹಲವು ಮನೆಗಳು ಹಾನಿಗೊಳಗಾಗಿ 8 ಮಂದಿ ಸಾವನ್ನಪ್ಪಿದ್ದಾರೆ. ಕಥುವಾ ಉಪವಿಭಾಗಾಧಿಕಾರಿ ರಾಕೇಶ್ ಮಿನ್ಹಾಸ್ ಮೃತರ ಕುಟುಂಬ ಸದಸ್ಯರಿಗೆ ತಕ್ಷಣಕ್ಕೆ 50,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಮಳೆ ಸಂಬಂಧಿತ ಪ್ರಕರಣಗಳಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಪ್ರವಾದಂತಹ ಪರಿಸ್ಥಿತಿಯ ಬಗ್ಗೆ ಸ್ಥಳೀಯ ಆಡಳಿತ ನಿಗಾವಹಿಸುತ್ತಿದೆ ಎಂದು ಮಿನ್ಹಾಸ್ ತಿಳಿಸಿದ್ದಾರೆ. ಮೃತರ ಕುಟುಂಬಗಳಿಗೆ 50,000 ರೂಪಾಯಿ ಪರಿಹಾರ ಘೋಷಣೆ ಮಾಡಿದ್ದು, ಗಾಯಾಳುಗಳ ಚಿಕಿತ್ಸೆಗಾಗಿ 25,000 ರೂಪಾಯಿ ನೀಡಲಾಗಿದೆ.
ತೀವ್ರ ಮಳೆಯಿಂದಾಗಿ ಮನೆಗಳು ಹಾನಿಗೊಳಗಾಗಿದ್ದು ಅವಶೇಷಗಳಡಿ ಸಿಲುಕಿರುವವರನ್ನು ಪೊಲೀಸರು, ಸೇನೆ, ಎಸ್ ಡಿಆರ್ ಎಫ್ ಹಾಗೂ ಸ್ಥಳೀಯರು ರಕ್ಷಿಸಿದ್ದಾರೆ.
ಮೃತರನ್ನು ಜರೀನಾ ಬೇಗಂ (40), ಆಕೆಯ ಇಬ್ಬರು ಮಕ್ಕಳಾದ ಶಹಬಾಜ್ ಅಹ್ಮದ್ (14) ಮತ್ತು ಅರ್ಬಾಜ್ (2), ನಾಜಿಯಾ ತಬಸ್ಸುಮ್ (14) ಮತ್ತು ಆಕೆಯ ಸಹೋದರ ಮೊಹಮ್ಮದ್ ಆಸಿಫ್ (12) ಎಂದು ಗುರುತಿಸಲಾಗಿದೆ.