ದೇಶ

ಡಬಲ್ ಇಂಜಿನ್ ಸರ್ಕಾರವಿದ್ದರೂ, ಮಣಿಪುರ ಎರಡು ತಿಂಗಳಿನಿಂದ ಹೊತ್ತಿ ಉರಿಯುತ್ತಿದೆ: ಜೆಡಿಯು

Ramyashree GN

ಪಾಟ್ನಾ: ಮಣಿಪುರದಲ್ಲಿ ಡಬಲ್ ಇಂಜಿನ್ ಸರ್ಕಾರವಿದ್ದರೂ, ಎರಡು ತಿಂಗಳಿಗಿಂತ ಹೆಚ್ಚು ಕಾಲ ಈಶಾನ್ಯ ರಾಜ್ಯವು ಹೊತ್ತಿ ಉರಿಯುತ್ತಿದೆ ಎಂದು ಜೆಡಿಯು ಗುರುವಾರ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಸೇನಾಪತಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಜನರ ಗುಂಪೊಂದು ಇಬ್ಬರು ಬುಡಕಟ್ಟು ಮಹಿಳೆಯರನ್ನು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿ ಕಿರುಕುಳ ನೀಡಿದ ಘಟನೆಯನ್ನು ಉಲ್ಲೇಖಿಸಿದ ಜೆಡಿಯು ರಾಜೀವ್ ರಂಜನ್ ಸಿಂಗ್, ಇದು ಭಯಾನಕ ಮತ್ತು ಆಘಾತಕಾರಿ ಎಂದು ಹೇಳಿದರು.

'ಈಶಾನ್ಯ ರಾಜ್ಯದಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವಿದೆ. ಆದರೆ, ಎರಡು ತಿಂಗಳಿಗೂ ಹೆಚ್ಚು ಕಾಲ ಮಣಿಪುರ ಹೊತ್ತಿ ಉರಿಯುತ್ತಿದೆ. ಪ್ರಧಾನಿಯ 56 ಇಂಚಿನ ಎದೆಗೆ ಏನಾಯಿತು? ಮಣಿಪುರದಲ್ಲಿ ಹಿಂಸಾಚಾರ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ನಾಯಕರು ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿರುವುದನ್ನು ಉಲ್ಲೇಖಿಸಲು 'ಡಬಲ್ ಇಂಜಿನ್' ಎಂಬ ಪದವನ್ನು ಬಳಸುತ್ತಾರೆ.

'ಮುಗ್ಧರನ್ನು ಕೊಲ್ಲಲಾಗುತ್ತಿದೆ; ಮಹಿಳೆಯರನ್ನು ಕ್ರೂರವಾಗಿ ಹಿಂಸಿಸಲಾಗುತ್ತಿದೆ. ಮಣಿಪುರದಲ್ಲಿ ಮಹಿಳೆಯರ ಮೇಲಿನ ಹಲ್ಲೆ ಭಯಾನಕ, ಆಘಾತಕಾರಿ ಮತ್ತು ಕಳವಳಕಾರಿಯಾಗಿದೆ' ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.

ಗಲಭೆ ಪೀಡಿತ ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೇ 4ರಂದು ಘಟನೆ ನಡೆದಿದ್ದು,ತಡವಾಗಿ ಬೆಳಕಿಗೆ ಬಂದಿದೆ. ಜನರ ಗುಂಪೊಂದು ಇಬ್ಬರು ಮಹಿಳೆಯರನ್ನು ಬೆತ್ತಲೆ ಮಾಡಿ, ಮೆರವಣಿಗೆ ಮಾಡಿದ ವಿಡಿಯೋ ಬುಧವಾರ ವೈರಲ್ ಆಗಿದ್ದು, ಸಂಘರ್ಷ ಪೀಡಿತ ರಾಜ್ಯದಲ್ಲಿ ಅನೇಕರು ಆಘಾತಕ್ಕೊಳಗಾಗಿದ್ದಾರೆ ಮತ್ತು ಘಟನೆಯನ್ನು ಖಂಡಿಸಿದ್ದಾರೆ.

ಘಟನೆಯ ಹಿಂದಿನ ಸೂತ್ರಧಾರರನ್ನು ಗುರುವಾರ ಬಂಧಿಸಲಾಗಿದೆ.

ಜೆಡಿಯು ಮುಖ್ಯ ವಕ್ತಾರ ನೀರಜ್ ಕುಮಾರ್ ಅವರು ಮಣಿಪುರದ ಬಿಕ್ಕಟ್ಟನ್ನು ನಿಭಾಯಿಸಲು ಕೇಂದ್ರ ವಿಫಲವಾಗಿದೆ ಎಂದು ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಣಿಪುರದಲ್ಲಿ ಇದುವರೆಗೆ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಏನೂ ಮಾಡದೆ ಸುಮ್ಮನೆ ಕುಳಿತಿದೆ ಎಂದು ದೂರಿದರು.

ಮೇ 3ರಂದು ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ 150ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. 

SCROLL FOR NEXT