ನವದೆಹಲಿ: ತಮ್ಮ ಬಂಧನಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್‌ನ ಭಿನ್ನ ತೀರ್ಪಿನ ವಿರುದ್ಧ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಮತ್ತು ಅವರ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಸಂಬಂಧ ಜಾರಿ ನಿರ್ದೇಶನಾಲಯ(ಇಡಿ)ಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ಶುಕ್ರವಾರ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ಎಂಎಂ ಸುಂದ್ರೇಶ್ ಅವರ ಪೀಠ, ಇಡಿಗೆ ನೋಟಿಸ್ ಜಾರಿ ಮಾಡಿ, ಪ್ರಕರಣದ ವಿಚಾರಣೆಯನ್ನು ಜುಲೈ 26, 2023ಕ್ಕೆ ಮುಂದೂಡಿದೆ.
ಬಲಾಜಿ ಪರ ವಕೀಲ ಕಪಿಲ್ ಸಿಬಲ್ ಅವರು ಪೊಲೀಸ್ ಕಸ್ಟಡಿಯಿಂದ ಮಧ್ಯಂತರ ರಕ್ಷಣೆ ಕೋರಿದರೂ, ಸುಪ್ರೀಂ ಪೀಠ "ಆಗುವುದಿಲ್ಲ" ಎಂದು ಮೌಖಿಕವಾಗಿ ಹೇಳುವ ಮೂಲಕ ಅಂತಹ ಯಾವುದೇ ಆದೇಶವನ್ನು ನೀಡಲು ನಿರಾಕರಿಸಿದೆ.
ಇದನ್ನು ಓದಿ: ಮದ್ರಾಸ್ ಹೈಕೋರ್ಟ್ ಭಿನ್ನ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ
ಸೆಂಥಿಲ್ ಬಾಲಾಜಿ ಅವರು ಜುಲೈ 4 ರಂದು ಮತ್ತು ಅವರ ಪತ್ನಿ ಜುಲೈ 14 ರಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಇದನ್ನು ಕ್ರಮವಾಗಿ ಇಬ್ಬರು ನ್ಯಾಯಾಧೀಶರು ಮತ್ತು ಏಕ ಸದಸ್ಯ ಪೀಠ ವಿಚಾರಣೆ ನಡೆಸುತ್ತಿದೆ.
ಸೆಂಥಿಲ್ ಬಾಲಾಜಿ ಅವರ ಬಂಧನಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಮೂರ್ತಿಗಳಾದ ನಿಶಾ ಬಾನು ಮತ್ತು ಡಿ ಭರತ ಚಕ್ರವರ್ತಿ ಅವರು ವಿಭಿನ್ನ ತೀರ್ಪು ನೀಡಿದ್ದರು. ನ್ಯಾಯಮೂರ್ತಿ ನಿಶಾ ಬಾನು ಅವರು ಬಾಲಾಜಿ ಬಿಡುಗಡೆಗಾಗಿ ಸಲ್ಲಿಸಲಾದ ಹೇಬಿಯಸ್ ಕಾರ್ಪಸ್ ಮನವಿ ಸಮರ್ಥನೀಯವಾಗಿದೆ, ಅವರನ್ನು ಬಿಡುಗಡೆ ಮಾಡಬಹುದು ಎಂದು ಹೇಳಿದ್ದರು. ಆದರೆ ನ್ಯಾಯಮೂರ್ತಿ ಡಿ ಭರತ ಚಕ್ರವರ್ತಿ ಅವರು ನ್ಯಾಯಮೂರ್ತಿ ಬಾನು ಅವರ ಅಭಿಪ್ರಾಯವನ್ನು ಒಪ್ಪಲು ಸಾಧ್ಯವಿಲ್ಲ, ಎದೆನೋವಿಗೆ ಚಿಕಿತ್ಸೆ ಪಡೆಯುತ್ತಿರುವ ಬಾಲಾಜಿ ಆಸ್ಪತ್ರೆಯಲ್ಲಿರುವಷ್ಟು ದಿನ ಇಡಿ ಕಸ್ಟಡಿಯಿಂದ ಹೊರಗಿರಲಿದ್ದಾರೆ. ಅಷ್ಟರೊಳಗೆ ಬಾಲಾಜಿ ಫಿಟ್ ಆಗಿದ್ದರೆ ಹತ್ತು ದಿನಗಳಲ್ಲಿ ಮತ್ತೆ ಇಡಿ ಕಸ್ಟಡಿಗೆ ತೆರಳಬಹುದು ಎಂದು ಹೇಳಿದ್ದರು.