ದೇಶ

ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಪ್ರವಾಹ ಪೀಡಿತ ಯವತ್ಮಾಲ್ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಜನರ ರಕ್ಷಣೆ

Lingaraj Badiger

ಯವತ್ಮಾಲ್: ವರುಣನ ಆರ್ಭಟಕ್ಕೆ ಪೂರ್ವ ಮಹಾರಾಷ್ಟ್ರ ತತ್ತರಿಸಿದ್ದು, ಯವತ್ಮಾಲ್ ಜಿಲ್ಲೆಯ ಮಹಾಗಾಂವ್ ತಹಸಿಲ್‌ನಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಸುಮಾರು 110 ಜನರನ್ನು ಶನಿವಾರ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್‌ಡಿಆರ್‌ಎಫ್) ಜೊತೆಗೆ ಭಾರತೀಯ ವಾಯುಪಡೆಯ ಎಂಐ-17 ವಿ5 ಹೆಲಿಕಾಪ್ಟರ್ ಅನ್ನು ಆನಂದನಗರ ತಾಂಡಾ ಗ್ರಾಮದಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಬಳಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅಮೋಲ್ ಯೆಡ್ಗೆ ಅವರು ಪಿಟಿಐಗೆ ತಿಳಿಸಿದ್ದಾರೆ.

ಎಸ್‌ಡಿಆರ್‌ಎಫ್ ಸಿಬ್ಬಂದಿ ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ ಮತ್ತು ರಕ್ಷಣಾ ಕಾರ್ಯಾಚರಣೆ ಮುಗಿದಿದೆ ಎಂದು ಅವರು ಹೇಳಿದ್ದಾರೆ.

ನಾಗ್ಪುರದಿಂದ 150 ಕಿ.ಮೀ ದೂರದಲ್ಲಿರುವ ಯವತ್ಮಾಲ್ ಜಿಲ್ಲೆಯಲ್ಲಿ ಶುಕ್ರವಾರದಿಂದ ಭಾರೀ ಮಳೆಯಾಗುತ್ತಿದೆ.

ಇದಕ್ಕು ಮುನ್ನ ಎರಡು ಐಎಎಫ್ ಹೆಲಿಕಾಪ್ಟರ್‌ಗಳು ನಾಗ್ಪುರದಿಂದ ರಕ್ಷಣಾ ಕಾರ್ಯಾಚರಣೆಗಾಗಿ ಯವತ್ಮಾಲ್ ಜಿಲ್ಲೆ ತೆರಳಿವೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಟ್ವೀಟ್ ಮಾಡಿದ್ದರು. ಆದರೆ ಕೇವಲ ಒಂದು ಹೆಲಿಕಾಪ್ಟರ್ ಅನ್ನು ಮಾತ್ರ ಕಳುಹಿಸಲಾಗಿದೆ ಎಂದು ರಕ್ಷಣಾ ವಕ್ತಾರರು ಹೇಳಿದ್ದರು.

ಮಹಾಗಾಂವ್ ತಹಸಿಲ್‌ನಲ್ಲಿ ಶುಕ್ರವಾರ ಮಧ್ಯರಾತ್ರಿಯಿಂದ ಶನಿವಾರ ಬೆಳಗಿನ ಜಾವದವರೆಗೆ 231 ಮಿಮೀ ಮಳೆ ದಾಖಲಾಗಿದ್ದರೆ, ಜಿಲ್ಲೆಯಲ್ಲಿ 117.5 ಮಿಮೀ ಮಳೆ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇನ್ನೊಂದು ಪೂರ್ವ ಮಹಾರಾಷ್ಟ್ರ ಜಿಲ್ಲೆಯ ಬುಲ್ಧಾನಾದ ಸಂಗ್ರಾಮ್‌ಪುರ ತೆಹಸಿಲ್‌ನ ಕಾಸರ್‌ಗಾಂವ್ ಗ್ರಾಮದಲ್ಲಿ ಸುಮಾರು 140 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಮೋಲ್ ಯೆಡ್ಗೆ ಅವರು ಹೇಳಿದ್ದಾರೆ.

SCROLL FOR NEXT