ನವದೆಹಲಿ: ಮಣಿಪುರದಲ್ಲಿನ ಜನಾಂಗೀಯ ಹಿಂಸಾಚಾರ ಕುರಿತು ಸಮಗ್ರ ಚರ್ಚೆ ನಡೆಯಬೇಕು ಹಾಗೂ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಬೇಕೆಂದು ಆಗ್ರಹಿಸಿ ಪ್ರತಿಪಕ್ಷಗಳು ಇಂದು ಸಹ ಪ್ರತಿಭಟನೆ, ಗದ್ದಲವನ್ನು ಮುಂದುವರೆಸಿದ್ದರಿಂದ ಲೋಕಸಭೆ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೂ ಮುಂದೂಡಲಾಯಿತು.
ಪ್ರಶ್ನೋತ್ತರ ಅವಧಿ ಆರಂಭವಾಗುತ್ತಿದ್ದಂತೆಯೇ ವಿಪಕ್ಷಗಳು ಪ್ರತಿಭಟನೆಯನ್ನು ಆರಂಭಿಸಿದವು. ಪ್ರತಿಭಟನಾನಿರತ ಸದಸ್ಯರು ತಮ್ಮ ಆಸನಗಳಿಗೆ ಮರಳಿ, ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಸ್ಪೀಕರ್ ಓಂ ಬಿರ್ಲಾ ಮನವಿ ಮಾಡಿದರು. ಭಿತ್ತಿ ಪತ್ರ ಪ್ರದರ್ಶನ ಹಾಗೂ ಘೋಷಣೆ ಕೂಗುವುದರಿಂದ ಯಾವುದೇ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ, ಸದನದ ಘನತೆ ಕಾಪಾಡುವಂತೆ ಸ್ಪೀಕರ್ ಹೇಳಿದರು.
ಇದನ್ನೂ ಓದಿ: ಸಂಸತ್ತು ಕಲಾಪ ಬಿಕ್ಕಟ್ಟು: ಮುಂದಿನ ಕಾರ್ಯತಂತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ವಿರೋಧ ಪಕ್ಷ ನಾಯಕರ ಸಭೆ
ಸ್ಪೀಕರ್ ಮನವಿಗೆ ವಿಪಕ್ಷಗಳ ಸದಸ್ಯರು ಕಿವಿಗೂಡದ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೂ ಮುಂದೂಡಲಾಯಿತು. ಜುಲೈ 20 ರಂದು ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದಲೂ ಕಾಂಗ್ರೆಸ್ ಮತ್ತಿತರ ವಿಪಕ್ಷಗಳು ಮಣಿಪುರ ಪರಿಸ್ಥಿತಿ ಕುರಿತು ಚರ್ಚೆಗೆ ಒತ್ತಾಯಿಸಿ ನಿರಂತರವಾಗಿ ಪ್ರತಿಭಟನೆಯಲ್ಲಿ ತೊಡಗಿದ್ದು, ಕಲಾಪ ವ್ಯರ್ಥವಾಗುತ್ತಿದೆ.
ಮಣಿಪುರ ಪರಿಸ್ಥಿತಿ ಕುರಿತ ಚರ್ಚೆಗೆ ಒತ್ತಾಯಿಸಿ ರಾಜ್ಯಸಭೆಯಲ್ಲೂ ವಿಪಕ್ಷಗಳು ಪ್ರತಿಭಟನೆ ಮುಂದುವರೆಸಿದ್ದರಿಂದ ಕಲಾಪವನ್ನು ಮಧ್ಯಾಹ್ನ 12 ಗಂಟೆಯವರೆಗೂ ಮುಂದೂಡಲಾಗಿತ್ತು. ನಂತರ ಮತ್ತೆ ಕಲಾಪ ಆರಂಭವಾಗಿದ್ದು, ಪ್ರಶ್ನೋತ್ತರ ಕಲಾಪ ನಡೆಯುತ್ತಿದೆ.