ಜಮ್ಮು: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಪಾಕಿಸ್ತಾನದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಇಬ್ಬರು ಸಹಚರರನ್ನು ಭಾರತೀಯ ಸೇನಾಪಡೆ ಬಂಧನಕ್ಕೊಶಪಡಿಸಿದ್ದು, ಬಂಧಿತರಿಂದ ಶಸ್ತ್ರಾಸ್ತ್ರಗಳು, ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ.
ಬಾರಾಮುಲ್ಲಾ ಜಿಲ್ಲೆಯ ಕ್ರೀರಿ ಗ್ರಾಮದ ಬಸ್ ನಿಲ್ದಾಣದಲ್ಲಿ ಇಬ್ಬರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಧಿತರನ್ನು ದಯೆಮ್ ಮಜೀದ್ ಖಾನ್ ಮತ್ತು ಉಬೈರ್ ತಾರಿಕ್ ಎಂದು ಗುರುತಿಸಲಾಗಿದೆ. ಸಂಶಯಾಸ್ಪದ ಚಲನವಲನಗಳ ಕುರಿತು ಖಚಿತ ಮಾಹಿತಿಗಳು ಲಭ್ಯವಾದ ಹಿನ್ನೆಲೆಯಲ್ಲಿ ಬಾರಾಮುಲ್ಲಾ ಪೊಲೀಸರು ಮತ್ತು 29 ಆರ್ಆರ್ ಪಡೆಗಳನ್ನು ಬಸ್ ನಿಲ್ದಾಣದಲ್ಲಿ ನಿಯೋಜನೆಗೊಳಿಸಲಾಗಿತ್ತು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನ; ಆಫ್ಘಾನಿಸ್ತಾನದಲ್ಲಿ ಮಾಸ್ಟರ್ ಮೈಂಡ್ ಜುನೈದ್, ಎಲ್ಇಟಿ ಜೊತೆ ನಂಟು!
ಇದರಂತೆ ಶಂಕಿತರು ಕ್ರೀರಿ ಮುಖ್ಯ ರಸ್ತೆಯ ಕಡೆಗೆ ಬರುತ್ತಿದ್ದರು. ಈ ವೇಳೆ ಭದ್ರತಾಪಡೆಗಳನ್ನು ನೋಡುತ್ತಿದ್ದಂತೆಯೇ ಸ್ಥಳದಿಂದ ಕಾಲ್ಕಿತ್ತಲು ಯತ್ನಿಸಿದರು. ಈ ವೇಳೆ ಇಬ್ಬರ ಬೆನ್ನಟ್ಟಿ ಬಂಧಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆಂದು ತಿಳಿದುಬಂದಿದೆ.
ವಿಚಾರಣೆ ವೇಳೆ ಇಬ್ಬರಿಗೂ ಎಲ್ಇಟಿ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಇರುವುದು ಖಚಿತವಾಗಿದೆ. ಬಾರಾಮುಲ್ಲಾ ಜಿಲ್ಲೆಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ಇಬ್ಬರೂ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರಿಂದ ಎರಡು ಚೀನಾ ನಿರ್ಮಿತ ಪಿಸ್ತೂಲ್‌ಗಳು, ಎರಡು ಪಿಸ್ತೂಲ್, ಮ್ಯಾಗಜೀನ್‌ಗಳು, 14 ಲೈವ್ ಪಿಸ್ತೂಲ್ ಗುಂಡುಗಳು, 1 ಐಡಿ ಕಾರ್ಡ್ ಮತ್ತು 1 ಆಧಾರ್ ಕಾರ್ಡ್‌ನ ಪ್ರತಿಯನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರನ್ನೂ ವಶಕ್ಕೆ ಪಡೆಯಲಾಗಿದ್ದು, ಈ ಸಂಬಂಧ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಯುಎಪಿಎ ಅಡಿಯಲ್ಲಿ ಕ್ರೀರಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.