ದೇಶ

ಬೆತ್ತಲೆ ಮೆರವಣಿಗೆ ನಡೆಸಿದ ಇಬ್ಬರು ಮಹಿಳೆಯರು ತೀವ್ರ ಆಘಾತದಲ್ಲಿದ್ದಾರೆ: ಡಿಸಿಡಬ್ಲ್ಯೂ ಮುಖ್ಯಸ್ಥೆ

Lingaraj Badiger

ನವದೆಹಲಿ: ಮಣಿಪುರದಲ್ಲಿ ಬೆತ್ತಲೆಯಾಗಿ ಮೆರವಣಿಗೆ ನಡೆಸಿದ ಇಬ್ಬರು ಮಹಿಳೆಯರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ ಮತ್ತು ಅವರಿಗೆ ಇನ್ನೂ ಯಾವುದೇ ಕೌನ್ಸೆಲಿಂಗ್ ಅಥವಾ ಪರಿಹಾರ ಸಿಕ್ಕಿಲ್ಲ ಎಂದು ಆ ಇಬ್ಬರು ಮಹಿಳೆಯರ ಕುಟುಂಬಗಳನ್ನು ಭೇಟಿ ಮಾಡಿದ ನಂತರ ಡಿಸಿಡಬ್ಲ್ಯೂ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು  ಮಂಗಳವಾರ ಹೇಳಿದ್ದಾರೆ.

ಈಶಾನ್ಯ ರಾಜ್ಯ ಪ್ರವಾಸದಲ್ಲಿರುವ ಮಲಿವಾಲ್, ಹಿಂಸಾಚಾರ ತಡೆಯಲು ವಿಫಲವಾದ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ದೆಹಲಿ ಮಹಿಳಾ ಆಯೋಗದ ಸದಸ್ಯೆ ವಂದನಾ ಸಿಂಗ್ ಅವರೊಂದಿಗೆ ಸೋಮವಾರ ಮಣಿಪುರದ ಚುರಾಚಂದ್‌ಪುರಕ್ಕೆ ತೆರಳಿದ ಮಲಿವಾಲ್ ಅವರು, ಲೈಂಗಿಕ ದೌರ್ಜನ್ಯದಿಂದ ಬದುಕುಳಿದವರ ತಾಯಿ ಮತ್ತು ಪತಿಯನ್ನು ಭೇಟಿ ಮಾಡಿದರು. 

ಬೆತ್ತಲೆ ಮೆರವಣಿಗೆ ವೀಡಿಯೊ ವೈರಲ್ ಆದ ನಂತರ ದೆಹಲಿ ಮಹಿಳಾ ಆಯೋಗ(ಡಿಸಿಡಬ್ಲ್ಯು)ದ ಅಧ್ಯಕ್ಷೆ ಚುರಾಚಂದ್‌ಪುರ, ಮೊಯಿರಾಂಗ್ ಮತ್ತು ಇಂಫಾಲ್ ಜಿಲ್ಲೆಗಳ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ ಹಿಂಸಾಚಾರದಲ್ಲಿ ಬದುಕುಳಿದವರೊಂದಿಗೆ ಸಂವಾದ ನಡೆಸಿದರು.

ಮಣಿಪುರ ಸರ್ಕಾರ ಮಲಿವಾಲ್‌ ಅವರು ಚುರಾಚಂದ್‌ಪುರಕ್ಕೆ ಪ್ರಯಾಣಿಸಲು ಅಥವಾ ಹಿಂಸಾಚಾರದಿಂದ ಬದುಕುಳಿದವರನ್ನು ಭೇಟಿ ಮಾಡಲು ಯಾವುದೇ ನೆರವು ನೀಡಲಿಲ್ಲ ಎಂದು ದೆಹಲಿ ಮಹಿಳಾ ಆಯೋಗ ಆರೋಪಿಸಿದೆ.

ಬೆತ್ತಲೆ ಮೆರವಣಿಗೆ ಮತ್ತು ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯ ಪತಿ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿದ್ದಾರೆ ಎಂದು ದೆಹಲಿ ಮಹಿಳಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ಸಂತ್ರಸ್ತ ಮಹಿಳೆಯರು ತೀವ್ರ ಆಘಾತದಲ್ಲಿದ್ದಾರೆ ಮತ್ತು ಆ ಭಯಾನಕ ಕ್ಷಣಗಳನ್ನು ನಿರಂತರವಾಗಿ ಮೆಲುಕು ಹಾಕುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬದುಕುಳಿದ ಮಹಿಳೆಯರಿಗೆ ಇದುವರೆಗೆ ಸರ್ಕಾರದಿಂದ ಯಾವುದೇ ಸಮಾಲೋಚನೆ, ಕಾನೂನು ನೆರವು ಅಥವಾ ಪರಿಹಾರ ಸಿಕ್ಕಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತರ ಕುಟುಂಬ ಆಕ್ರೋಶ ವ್ಯಕ್ತಪಡಿಸಿರುವುದಾಗಿ'' ಡಿಸಿಡಬ್ಲ್ಯು ಆರೋಪಿಸಿದೆ.

SCROLL FOR NEXT