ದೇಶ

ಮಣಿಪುರ ಹಿಂಸಾಚಾರ: ಪ್ರತಿಪಕ್ಷಗಳಿಂದ ನಾಳೆ ಕಪ್ಪು ಬಟ್ಟೆ ಧರಿಸಿ ಸಂಸತ್ತಿನಲ್ಲಿ ಪ್ರತಿಭಟನೆ

Lingaraj Badiger

ನವದೆಹಲಿ: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುತ್ತಿರುವ ಪ್ರತಿಪಕ್ಷಗಳ ಮೈತ್ರಿಕೂಟ INDIAದ ಎಲ್ಲಾ ಸಂಸದರು ಗುರುವಾರ ಸಂಸತ್ತಿನಲ್ಲಿ ಕಪ್ಪು ಬಟ್ಟೆ ಧರಿಸಿ ಧರಣಿ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಇದುವರೆಗೂ ಹೇಳಿಕೆ ನೀಡದಿರುವುದನ್ನು ಖಂಡಿಸಲು INDIAದ ಎಲ್ಲಾ ಸಂಸದರಿಗ ಕಪ್ಪು ಬಟ್ಟೆ ಧರಿಸಿ ಸಂಸತ್ತಿಗೆ ಆಗಮಿಸುವಂತೆ ಸೂಚಿಸಲಾಗಿದೆ ಎಂದು ಆಪ್ ಬಣದ ಸಂಸದರೊಬ್ಬರು ತಿಳಿಸಿದ್ದಾರೆ.

ಈ ಮಧ್ಯೆ, ಪ್ರತಿಪಕ್ಷಗಳ ಮೈತ್ರಿಕೂಟದ ಪರವಾಗಿ ಕಾಂಗ್ರೆಸ್, ಮೋದಿ ಸರ್ಕಾರದ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಬುಧವಾರ ಅಂಗೀಕರಿಸಿದ್ದಾರೆ.

ಎಲ್ಲಾ ಪಕ್ಷಗಳ ನಾಯಕರೊಂದಿಗೆ ಸಮಾಲೋಚಿಸಿದ ನಂತರ ಅವಿಶ್ವಾಸ ನಿರ್ಣಯದ ಮೇಲಿನ  ಚರ್ಚೆಯ ದಿನಾಂಕವನ್ನು ನಿರ್ಧರಿಸಲಾಗುವುದು ಎಂದು ಓಂ ಬಿರ್ಲಾ ಅವರು ತಿಳಿಸಿದ್ದಾರೆ.

ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆಯೇ ಇಂದು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ತಿದ್ದುಪಡಿ ಮಸೂದೆ ಸೇರಿದಂತೆ ಆರು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು ಮತ್ತು ಅರಣ್ಯ (ಸಂರಕ್ಷಣೆ) ಕಾಯಿದೆಗೆ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲಾಗಿದೆ. ಬಳಿಕ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.

SCROLL FOR NEXT