ದೇಶ

ರಾಂಚಿಯಲ್ಲಿ ತಡರಾತ್ರಿ ದುಷ್ಕರ್ಮಿಗಳ ಅಟ್ಟಹಾಸ: ಗುಂಡಿಕ್ಕಿ ಸಿಪಿಐ(ಎಂ) ಮುಖಂಡನ ಹತ್ಯೆ

Shilpa D

ರಾಂಚಿ: ಜಾರ್ಖಂಡ್ ನ ರಾಂಚಿಯಲ್ಲಿ ಸ್ಥಳೀಯ ಸಿಪಿಐ(ಎಂ) ನಾಯಕ ಸುಭಾಷ್ ಮುಂಡಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪರಿಣಾಮ ಹಿಂಸಾಚಾರ ಭುಗಿಲೆದ್ದಿದೆ.

ಸ್ಥಳೀಯ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ ವಾದಿ), ಸಿಪಿಐ(ಎಂ) ಮುಖಂಡ ಸುಭಾಷ್ ಮುಂಡಾ ಅವರನ್ನು ರಾಂಚಿಯ ದಲಾದಲಿ ಪ್ರದೇಶದಲ್ಲಿ ಬುಧವಾರ ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಂಚಿಯ ದಲದಾಲಿ ಚೌಕ್‌ನಲ್ಲಿರುವ ಅವರ ಕಚೇರಿಯಲ್ಲಿ ರಾತ್ರಿ 7 ರಿಂದ 8 ಗಂಟೆಯ ನಡುವೆ ಈ ಘಟನೆ ನಡೆದಿದೆ.  ದ್ವಿಚಕ್ರವಾಹನದಲ್ಲಿ ಬಂದ ದುಷ್ಕರ್ಮಿಗಳು ಏಳು ಬಾರಿ ಗುಂಡುಗಳನ್ನು ಹಾರಿಸಿದ್ದಾರೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಪ್ರಕಾಶ್ ವಿಪ್ಲವ್ ಹೇಳಿದ್ದಾರೆ.

ಘಟನೆಯ ನಂತರ, ಕ್ರೋಧಗೊಂಡ ಸ್ಥಳೀಯರು ಸ್ಥಳದಲ್ಲಿದ್ದ ಅಂಗಡಿಗಳನ್ನು ಧ್ವಂಸಗೊಳಿಸಿ, ರಸ್ತೆಯಲ್ಲಿ ಸಂಚಾರವನ್ನು ನಿರ್ಬಂಧಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಡಾ ಅವರು ಹಟಿಯಾ ಕ್ಷೇತ್ರದಿಂದ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಹಾಗೂ ಮಂದರ್ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಹತ್ಯೆಯ ವಿರುದ್ಧ ಪ್ರತಿಭಟನೆ ಮಧ್ಯರಾತ್ರಿಯವರೆಗೂ ಮುಂದುವರೆದಿದ್ದು, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಎಲ್ಲಾ ಅಗತ್ಯ ಕ್ರಮಗಳನ್ನು ಪೊಲೀಸರು  ತೆಗೆದುಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಮಾಂತರದ  ಎಸ್‌ಪಿ ನೌಶಾದ್ ಆಲಂ ಅವರು ಮಾಹಿತಿ ನೀಡಿ, ರಾಂಚಿಯ ದಲಾದಲಿ ಪ್ರದೇಶದಲ್ಲಿ ಸಿಪಿಐ(ಎಂ) ಮುಖಂಡ ಸುಭಾಷ್ ಮುಂಡಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಮುಂಡಾ ತನ್ನ ಕಚೇರಿಯಲ್ಲಿ ಕುಳಿತಿದ್ದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.

SCROLL FOR NEXT