ದೇಶ

ಜಾತಿ ಕಿರುಕುಳದಿಂದ ಐಐಟಿ ವಿದ್ಯಾರ್ಥಿ ಸಾವು: ಪೊಲೀಸರು

Lingaraj Badiger

ಮುಂಬೈ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ(ಐಐಟಿಬಿ) ವಿದ್ಯಾರ್ಥಿ ದರ್ಶನ್ ಸೋಲಂಕಿ ಅವರು ಜಾತಿ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮುಂಬೈ ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ಸಹ ವಿದ್ಯಾರ್ಥಿಗಳು ತನ್ನ ಜಾತಿಯ ಬಗ್ಗೆ ತಿಳಿದುಕೊಂಡ ನಂತರ ಅವರ ನಡವಳಿಕೆಯೇ ಬದಲಾಯಿತು ಎಂದು ಸೋಲಂಕಿ ತಾಯೊಂದಿಗೆ ನಡೆದ ದೂರವಾಣಿ ಸಂಭಾಷಣೆಯಲ್ಲಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಯ ವಿಶೇಷ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಸೋಲಂಕಿ ಅವರ ತಾಯಿಯ ಹೇಳಿಕೆಯನ್ನು ದಾಖಲಿಸಲಾಗಿದೆ.

ಚಾರ್ಜ್ ಶೀಟ್ ನಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಗಿರುವ ಸಹ ವಿದ್ಯಾರ್ಥಿ ಅರ್ಮಾನ್ ಖತ್ರಿ ಹೆಸರು ಉಲ್ಲೇಖಿಸಲಾಗಿದೆ.

ಅಹಮದಾಬಾದ್ ಮೂಲದ ಬಿ-ಟೆಕ್(ರಾಸಾಯನಿಕ) ಕೋರ್ಸ್‌ನ ಪ್ರಥಮ ವರ್ಷದ ವಿದ್ಯಾರ್ಥಿ ಸೋಲಂಕಿ, ಫೆಬ್ರವರಿ 12, 2023 ರಂದು ಮುಂಬೈನ ಪೊವೈ ಪ್ರದೇಶದ ಐಐಟಿಬಿ ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್ ಕಟ್ಟಡದ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಧರ್ಮದ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿದ ನಂತರ ಸೋಲಂಕಿಯನ್ನು ಕೊಲ್ಲುವುದಾಗಿ ಖತ್ರಿ ಬೆದರಿಕೆ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸೋಲಂಕಿ ಅವರ ತಾಯಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಡಿಸೆಂಬರ್ 2022 ರಲ್ಲಿ ದೂರವಾಣಿ ಸಂಭಾಷಣೆಯ ಸಮಯದಲ್ಲಿ, ಸೋಲಂಕಿ ಐಐಟಿಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಹೇಳಿದ್ದಾನೆ.

SCROLL FOR NEXT