ಬಾಲಾಸೋರ್: ಇಡೀ ದೇಶವನ್ನು ಬೆಚ್ಚಿ ಬೀಳಿಸಿದ ಭೀಕರ ತ್ರಿವಳಿ ರೈಲು ಅಪಘಾತಕ್ಕೆ ಕೋಮು ಬಣ್ಣ ಹಚ್ಚುವ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. 275 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 1,110ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಬಾಲಾಸೋರ್ ರೈಲು ದುರಂತ ಕುರಿತ ವದಂತಿ ಹರಡುವುದನ್ನು ನಿಲ್ಲಿಸುವಂತೆ ಒಡಿಶಾ ಪೊಲೀಸರು ಭಾನುವಾರ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಒಡಿಶಾ ರೈಲು ದುರಂತ: ಗಾಯಗೊಂಡ ಪ್ರಯಾಣಿಕರ ಚಿಕಿತ್ಸೆಯ ವ್ಯವಸ್ಥೆಯನ್ನು ಪರಿಶೀಲಿಸಿದ ಕೇಂದ್ರ ಆರೋಗ್ಯ ಸಚಿವರು!
ಯಾವುದೇ ವದಂತಿ ಹಬ್ಬಿಸುವ ಮೂಲಕ ಕೋಮು ಸೌಹಾರ್ದತೆ ಹದಗೆಡಿಸಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಒಡಿಶಾ ಪೊಲೀಸರು,
ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ಅಪಘಾತಕ್ಕೆ ಕೋಮು ಬಣ್ಣ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಅತ್ಯಂತ ದುರದೃಷ್ಟಕರ’ ಎಂದಿದ್ದಾರೆ.
'ಇಂತಹ ಸುಳ್ಳು ಮತ್ತು ದುರುದ್ದೇಶಪೂರಿತ ಪೋಸ್ಟ್ ಹಾಕುವುದನ್ನು ನಿಲ್ಲಿಸುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡುತ್ತೇವೆ. ವದಂತಿ ಹಬ್ಬಿಸುವ ಮೂಲಕ ಕೋಮು ಸೌಹಾರ್ದತೆ ಹದಗೆಡಿಸಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದ್ದಾರೆ.
ನಿರ್ದಿಷ್ಟ ಸಮುದಾಯಕ್ಕೆ ಸೇರಿರುವ ಕಟ್ಟಡದ ಬಳಿ ರೈಲು ಅಪಘಾತ ಸಂಭವಿಸಿದೆ ಎಂದು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳುತ್ತಿದ್ದರೆ ಮತ್ತೆ ಕೆಲವರು ಇದನ್ನು ಖಂಡಿಸಿದ್ದಾರೆ.