ದೇಶ

ಸಚಿನ್ ಪೈಲಟ್ ರಿಂದ ಹೊಸ ಪಕ್ಷ ಸ್ಥಾಪನೆ? ಕಾಂಗ್ರೆಸ್ ಹೇಳಿದ್ದೇನು?

Lingaraj Badiger

ನವದೆಹಲಿ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ಜೂನ್ 11 ರಂದು ತಮ್ಮ ತಂದೆ ರಾಜೇಶ್ ಪೈಲಟ್ ಅವರ ಪುಣ್ಯತಿಥಿಯಂದು ಹೊಸ ರಾಜಕೀಯ ಪಕ್ಷ ಘೋಷಿಸಬಹುದು ಎಂಬ ವದಂತಿಗಳನ್ನು ಕಾಂಗ್ರೆಸ್ ಶುಕ್ರವಾರ ಸ್ಪಷ್ಟವಾಗಿ ತಳ್ಳಿಹಾಕಿದೆ.
  
ರಾಜಸ್ಥಾನದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಗ್ಗಟ್ಟಿನಿಂದ ಸ್ಪರ್ಧಿಸಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಕೆ ಸಿ ವೇಣುಗೋಪಾಲ್ ಅವರು ಹೇಳಿದ್ದಾರೆ.

"ನಾನು ವದಂತಿಗಳನ್ನು ನಂಬುವುದಿಲ್ಲ, ವಾಸ್ತವವೆಂದರೆ ಕಾಂಗ್ರೆಸ್ ಅಧ್ಯಕ್ಷರು ಮತ್ತು ರಾಹುಲ್ ಗಾಂಧಿ ಅವರು ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ಅವರೊಂದಿಗೆ ಚರ್ಚಿಸಿದ್ದಾರೆ. ನಂತರ ನಾವು ಒಟ್ಟಿಗೆ ಹೋಗುತ್ತೇವೆ ಎಂದು ಹೇಳಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ನಿಲುವು" ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.

ಸಚಿನ್ ಪೈಲಟ್ ಅವರು ಹೊಸ ಪಕ್ಷವನ್ನು ಸ್ಥಾಪಿಸುವ ವರದಿಗಳ ಬಗ್ಗೆ ಕೇಳಿದಾಗ, "ನನಗೆ ಗೊತ್ತಿರುವಂತೆ, ಅಂತಹ ಯಾವುದೇ ಬೆಳವಣಿಗೆ ರಾಜಸ್ಥಾನದಲ್ಲಿ ನಡೆಯುತ್ತಿಲ್ಲ" ಎಂದು ಅವರು ಹೇಳಿದ್ದಾರೆ.

ಮಾಧ್ಯಮಗಳಿಗೆ ಇಂತಹ ವದಂತಿಗಳನ್ನು ನಂಬಬೇಡಿ ಎಂದ ಕೆಸಿ ವೇಣುಗೋಪಾಲ್, "ನಿಮಗೆ ಯಾರು ಹೇಳಿದರು ಅವರು ಪಕ್ಷದಿಂದ ಹೊರಗೆ ಹೋಗುತ್ತಾರೆ ಅಂತ. ಇವು ಕಾಲ್ಪನಿಕ... ವದಂತಿಗಳು. ಈ ವದಂತಿಗಳನ್ನು ನಂಬಬೇಡಿ. ಆಶಾವಾದಿಯಾಗಿರಿ. ಚಿಂತಿಸಬೇಡಿ, ನಾವು ಒಗ್ಗಟ್ಟಿನಿಂದ ಹೋರಾಡುತ್ತೇವೆ. ರಾಜಸ್ಥಾನ ಕಾಂಗ್ರೆಸ್ ಒಗ್ಗಟ್ಟಿನಿಂದ ಹೋರಾಡುತ್ತದೆ" ಎಂದು ಅವರು ಹೇಳಿದ್ದಾರೆ.

SCROLL FOR NEXT