ದೇಶ

ಡಬ್ಲ್ಯುಎಫ್ ಐ ಅಧ್ಯಕ್ಷರ ವಿರುದ್ಧ ಮಾತ್ರ ನಮ್ಮ ಪ್ರತಿಭಟನೆ, ಸರ್ಕಾರದ ವಿರುದ್ಧ ಅಲ್ಲ: ಸಾಕ್ಷಿ ಮಲಿಕ್

Lingaraj Badiger

ನವದೆಹಲಿ: ನಮ್ಮ ಪ್ರತಿಭಟನೆ ರಾಜಕೀಯ ಪ್ರೇರಿತವಲ್ಲ ಎಂದಿರುವ ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರು, ಡಬ್ಲ್ಯುಎಫ್ ಐ ಅಧ್ಯಕ್ಷರ ವಿರುದ್ಧ ಮಾತ್ರ ನಮ್ಮ ಪ್ರತಿಭಟನೆ, ಸರ್ಕಾರದ ವಿರುದ್ಧ ಅಲ್ಲ ಎಂದು ಶನಿವಾರ ಹೇಳಿದ್ದಾರೆ.

ಈ ಮುಂಚೆ ಕುಸ್ತಿಪಟುಗಳು ಒಗ್ಗಟ್ಟಾಗಿರದ ಕಾರಣ ಹಲವು ವರ್ಷಗಳ ಕಾಲ ಕಿರುಕುಳವನ್ನು ಸಹಿಸಿಕೊಂಡು ಮೌನವಾಗಿದ್ದರು ಎಂದು ಸಾಕ್ಷಿ ಮಲಿಕ್ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ. ಈ ವೇಳೆ ಅವರ ಪತಿ, ಕುಸ್ತಿಪಟು ಸತ್ಯವರ್ತ್ ಕಡಿಯಾನ್ ಸಹ ಜೊತೆಗಿದ್ದಾರೆ.

ಕುಸ್ತಿಪಟುಗಳ ಪ್ರತಿಭಟನೆಯ ಬಗ್ಗೆ ಸುಳ್ಳುಗಳನ್ನು ಸೃಷ್ಟಿಸಲಾಗುತ್ತಿದೆ. ಈ ಕುರಿತ ವದಂತಿಗಳನ್ನು ತೆರವುಗೊಳಿಸಲು ತಾವು ಬಯಸಿರುವುದಾಗಿ ಕಡಿಯನ್ ಹೇಳಿದ್ದಾರೆ.

"ನಮ್ಮ ಪ್ರತಿಭಟನೆಯು ರಾಜಕೀಯ ಪ್ರೇರಿತವಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ. ನಾವು ಜನವರಿಯಲ್ಲಿ ಜಂತರ್ ಮಂತರ್‌ಗೆ ಬಂದಿದ್ದೇವೆ ಮತ್ತು ಪ್ರತಿಭಟನೆಗೆ ಪೊಲೀಸರ ಅನುಮತಿ ಪಡೆದುಕೊಂಡಿದ್ದೇವೆ" ಎಂದು ಕಡಿಯನ್ ಹೇಳಿದ್ದಾರೆ.

"ಇದು ಕಾಂಗ್ರೆಸ್ ಬೆಂಬಲಿತ ಪ್ರತಿಭಟನೆ ಅಲ್ಲ. ಕಳೆದ 10-12 ವರ್ಷಗಳಿಂದ ಇದು(ಕಿರುಕುಳ ಮತ್ತು ಬೆದರಿಕೆ) ನಡೆಯುತ್ತಿದೆ ಎಂಬುದು ಶೇ. 90 ಹೆಚ್ಚು ಕುಸ್ತಿಪಟುಗಳಿಗೆ ತಿಳಿದಿತ್ತು. ಕೆಲವರು ಧ್ವನಿ ಎತ್ತಲು ಬಯಸಿದ್ದರು. ಆದರೆ ಕುಸ್ತಿಪಟುಗಳು ಒಗ್ಗಟ್ಟಾಗಿರಲಿಲ್ಲ" ಎಂದು ಅವರು ಹೇಳಿದ್ದಾರೆ.

"ಅಪ್ರಾಪ್ತ ಕುಸ್ತಿಪಟು ತನ್ನ ಹೇಳಿಕೆ ಹಿಂತೆಗೆದುಕೊಂಡಿರುವುದನ್ನು ನೀವು ನೋಡಿದ್ದೀರಿ. ಆಕೆಯ ಕುಟುಂಬಕ್ಕೆ ಬೆದರಿಕೆ ಇದೆ. ಈ ಕುಸ್ತಿಪಟುಗಳು ಬಡ ಕುಟುಂಬದಿಂದ ಬಂದವರು. ಶಕ್ತಿಯುತ ವ್ಯಕ್ತಿಯನ್ನು ಎದುರಿಸುವುದು ಸುಲಭವಲ್ಲ" ಎಂದು ಸಾಕ್ಷಿ ಮಲಿಕ್ ಹೇಳಿದ್ದಾರೆ.

ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಸೇರಿದಂತೆ ದೇಶದ ಅಗ್ರ ಕುಸ್ತಿಪಟುಗಳು, ನಿರ್ಗಮಿತ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಆರೋಪ ಮಾಡಿದ್ದಾರೆ.

ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಜಮ್ಮು ಮತ್ತು ಕಾಶ್ಮೀರ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಪ್ರತಿಭಟನಾ ಸ್ಥಳಕ್ಕೆ ಭೇಟಿ ಕುಸ್ತಿಪಟುಗಳಿಗೆ ಬೆಂಬಲ ನೀಡಿದ್ದರು.

SCROLL FOR NEXT