ದೇಶ

ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ: ಬಿಜೆಪಿ ಅಭ್ಯರ್ಥಿಯ ಸಂಬಂಧಿ ಮೃತದೇಹ ಪತ್ತೆ

Nagaraja AB

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಜುಲೈ 8 ರಂದು ನಡೆಯಲಿರುವ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಕೂಚ್ ಬಿಹಾರ್ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಯ ಸೋದರ ಮಾವನ ಶವ ಪತ್ತೆಯಾಗಿದೆ. ಸುಮಾರು 30 ವರ್ಷ ವಯಸ್ಸಿನ ಸಂಭು ದಾಸ್ ಅವರನ್ನು ಶನಿವಾರ ರಾತ್ರಿ ಅಪರಿಚಿತ ಯುವಕರು ಮನೆಯಿಂದ ಹೊರಗೆ ಕರೆ ತಂದಿದ್ದಾರೆ. ಕೆಲ ಗಂಟೆಗಳ ನಂತರ ಚಾಕು ಇರಿತದ ಗಾಯಗಳೊಂದಿಗೆ ಅವರ ಮೃತದೇಹ ಕೊಳದ ಬಳಿ ಪತ್ತೆಯಾಗಿದೆ.

ದಸ್ಗ್ರಾಮ್ ಪ್ರದೇಶದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಿಸಾಖಾ ದಾಸ್ ಹೆಸರನ್ನು ಬೆಂಬಲಿಸಿದ್ದ ದಾಸ್ ಅವರನ್ನು ತೃಣಮೂಲ ಬೆಂಬಲಿಗರು ಹತ್ಯೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಅಜೋಯ್ ರಾಯ್ ಆರೋಪಿಸಿದ್ದಾರೆ. ರಾಯ್ ಅವರ ಹೇಳಿಕೆಯನ್ನು ನಿರಾಕರಿಸಿದ ಪಶ್ಚಿಮ ಬಂಗಾಳದ ಸಚಿವ ಮತ್ತು ತೃಣಮೂಲದ ದಿನ್ಹತಾ ಶಾಸಕ ಉದಯನ್ ಗುಹಾ, ಘಟನೆಯಲ್ಲಿ ಪಕ್ಷದ ಯಾವುದೇ ಪಾತ್ರವಿಲ್ಲ ಮತ್ತು ದಾಸ್ ರಾಜಕೀಯ ಕಾರ್ಯಕರ್ತನಲ್ಲ ಎಂದು ಹೇಳಿದ್ದಾರೆ. 

ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ದಾಸ್ ಹತ್ಯೆ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಪ್ರತಿಯೊಂದು ಅಪರಾಧಕ್ಕೂ ಬಿಜೆಪಿ ರಾಜಕೀಯ ತಿರುವು ನೀಡುತ್ತದೆ ಮತ್ತು ಅದನ್ನು ಪಂಚಾಯತ್ ಚುನಾವಣೆಗಳೊಂದಿಗೆ ಜೋಡಿಸಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಮತ್ತೊಂದು ಪ್ರಕರಣದಲ್ಲಿ ಮಾಲ್ಡಾ ಜಿಲ್ಲೆಯ ಸುಜಾಪುರ ಪ್ರದೇಶದಲ್ಲಿ ಟ್ರಯನ್‌ಮೂಲ್ ಅಭ್ಯರ್ಥಿ ಮುಸ್ತಫಾ ಶೇಖ್ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮೂರು ಹಂತದ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ವ್ಯಾಪಕ ಹಿಂಸಾಚಾರ ನಡೆಯುತ್ತಿದ್ದು,  ಕನಿಷ್ಠ ಏಳು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

SCROLL FOR NEXT