ದೇಶ

ಜೂನ್ 25, 1975 ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ದಿನ: ಜೈಲಿಗೆ ಹೋದವರು ಏನಂತಾರೆ?

Sumana Upadhyaya

ಲಕ್ನೋ: ಸುಮಾರು 50 ವರ್ಷಗಳ ಹಿಂದಿನ ಘಟನೆ. ಲಕ್ನೋ ನಿವಾಸಿ ತೇಜ್ ನಾರಾಯಣ ಗುಪ್ತಾ ಅವರ ಮನೆಗೆ ಸಂಜೆಯ ಹೊತ್ತಿಗೆ ಪೊಲೀಸ್ ತಂಡವೊಂದು ಬಂದು ಮನೆ ಬಾಗಿಲನ್ನು ಬಡಿಯುತ್ತದೆ. ಬಾಗಿಲು ತೆರೆದ ಕೂಡಲೇ ಗುಪ್ತಾ ಅವರನ್ನು ಕರೆದುಕೊಂಡು ಹೋಗುತ್ತಾರೆ. 

ಅದು 1975ರ ಜೂನ್ 25ರಂದು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ದಿನ. ಅದರ ಮರುದಿನ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಾಯಿತು. ರಾಷ್ಟ್ರವ್ಯಾಪಿ ಹಲವಾರು ವಿರೋಧ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಜೈಲಿಗೆ ಕಳುಹಿಸಲಾಯಿತು. 
ರಾತ್ರಿ 9 ಗಂಟೆ ಸುಮಾರಿಗೆ ನಾನು ಮನೆಗೆ ಆಗತಾನೆ ಹಿಂತಿರುಗಿದ್ದೆ.  ಪೊಲೀಸರ ತಂಡವೊಂದು ನನ್ನ ಮನೆಯ ಮೇಲೆ ದಾಳಿ ನಡೆಸಿ ಬಂಧಿಸಿ ಕರೆದುಕೊಂಡು ಹೋದರು ಎನ್ನುತ್ತಾರೆ ಗುಪ್ತಾ. ಅವರು ಆ ದಿನಗಳಲ್ಲಿ ಸಕ್ರಿಯ ವಕೀಲರಾಗಿದ್ದರು.  

ಪೊಲೀಸರು ಮನೆಯಿಂದ ಎರಡು ಕಿಮೀ ದೂರದಲ್ಲಿರುವ ಬಜಾರ್ ಖಾಲಾ ಪೊಲೀಸ್ ಠಾಣೆಗೆ ಸೈಕಲ್‌ನಲ್ಲಿ ಕರೆದುಕೊಂಡು ಹೋದರು. ನಂತರ ಕೈಸರ್‌ಬಾಗ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಅಂತಿಮವಾಗಿ ಇತರ ಬಂಧಿತ ವ್ಯಕ್ತಿಗಳೊಂದಿಗೆ ಲಕ್ನೋ ಜಿಲ್ಲಾ ಜೈಲಿನಲ್ಲಿ ನನ್ನನ್ನು ಇರಿಸಿದರು. 

ಪೊಲೀಸರು ಸೈಕಲಿನಲ್ಲಿ ಹೋಗುತ್ತಿದ್ದರು. ಕೂಲಿ ಕಾರ್ಮಿಕರೊಬ್ಬರಿಂದ ಸೈಕಲ್ ತೆಗೆದುಕೊಂಡಿದ್ದರು.  ಸೈಕಲ್ ನ ಮುಂದೆ ರಾಡ್ ನಲ್ಲಿ ನಾನು ಕುಳಿತಿದ್ದೆ. ನಿಧಾನವಾಗಿ ಅವರು ಸೈಕಲ್ ಓಡಿಸುತ್ತಿದ್ದರು. ನಮ್ಮ ಮನೆ ಸುತ್ತಮುತ್ತಲಿನ ನಿವಾಸಿಗಳಲ್ಲಿ ಭಯ ಹುಟ್ಟಿಸಲು ಪೊಲೀಸರು ನೋಡುತ್ತಿದ್ದರು ಎನ್ನುತ್ತಾರೆ ಈಗ 83 ವರ್ಷದ ಗುಪ್ತಾ.

ತುರ್ತುಪರಿಸ್ಥಿತಿ ಹೇರಿಕೆಯನ್ನು ಡಕಾಯಿತಿಗೆ ಹೋಲಿಸಿದ ಅವರು, ಸಾಮಾನ್ಯವಾಗಿ, ಮಧ್ಯರಾತ್ರಿಯ ಸಮಯದಲ್ಲಿ ಡಕಾಯಿತಿಯನ್ನು ನಡೆಸಲಾಗುತ್ತದೆ, ಅದೇ ರೀತಿ, ದೇಶದಲ್ಲಿ ಪ್ರಜಾಪ್ರಭುತ್ವದ ಈ ಡಕಾಯಿತಿಯು ಮಧ್ಯರಾತ್ರಿಯ ಸಮಯದಲ್ಲಿ ನಡೆಯಿತು ಎಂದು ಹೇಳಿದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ(Indira Gandhi) ಸರ್ಕಾರವು ಜೂನ್ 25 ರಂದು ರಾತ್ರಿ ತುರ್ತು ಪರಿಸ್ಥಿತಿಯನ್ನು(Emergency period) ಹೇರಿತು, ನಾಗರಿಕ ಸ್ವಾತಂತ್ರ್ಯಗಳನ್ನು ಅಮಾನತುಗೊಳಿಸಿತು. ಪತ್ರಿಕಾ ಸೆನ್ಸಾರ್ ಮಾಡಿತು.ಮರುದಿನ ಬೆಳಗ್ಗೆ ಪ್ರತಿಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಪ್ರಾರಂಭವಾಯಿತು. ದೇಶಾದ್ಯಂತ ಜೈಲಿಗೆ ಕಳುಹಿಸಲಾಯಿತು. 

ಜೈಲಿನಲ್ಲಿ ನಮ್ಮ ಭವಿಷ್ಯ ಕತ್ತಲೆಯಾಗಿತ್ತು, ಯಾವಾಗ ಹೊರಬರುತ್ತೇವೆ ಎಂದು ಗೊತ್ತಿರಲಿಲ್ಲ. ತಿಂಗಳುಗಳ ನಂತರ ಪರಿಸ್ಥಿತಿ ಬದಲಾಯಿತು. ಮಾರ್ಚ್ 21, 1977 ರಂದು ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಲಾಯಿತು ಎಂದು ನೆನಪಿಸಿಕೊಳ್ಳುತ್ತಾರೆ. 

ಜೂನ್ 18 ರಂದು ತಮ್ಮ 'ಮನ್ ಕಿ ಬಾತ್' ರೇಡಿಯೋ ಪ್ರಸಾರದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ತುರ್ತು ಪರಿಸ್ಥಿತಿಯನ್ನು ಭಾರತದ ಇತಿಹಾಸದಲ್ಲಿ "ಕರಾಳ ಅವಧಿ" ಎಂದು ಬಣ್ಣಿಸಿದರು. ಆ ಸಮಯದಲ್ಲಿ ಪ್ರಜಾಪ್ರಭುತ್ವವನ್ನು ಬೆಂಬಲಿಸಿದವರಿಗೆ ಚಿತ್ರಹಿಂಸೆ ನೀಡಲಾಗಿತ್ತು ಎಂದು ಹೇಳಲಾಯಿತು. 

ಉತ್ತರ ಪ್ರದೇಶದ ರಾಜಕೀಯ ಪಿಂಚಣಿ ಇಲಾಖೆಯ ಪ್ರಕಾರ, ರಾಜ್ಯದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಂಧಿತರಾದವರಲ್ಲಿ 4,755 ಮಂದಿ ಇನ್ನೂ ಜೀವಂತವಾಗಿದ್ದಾರೆ. ಅವರನ್ನು ಈಗ "ಲೋಕತಂತ್ರ ಸೇನಾನಿ ಅಥವಾ ಪ್ರಜಾಪ್ರಭುತ್ವದ ಹೋರಾಟಗಾರರು" ಎಂದು ಕರೆಯಲಾಗುತ್ತದೆ. ಅವರಲ್ಲಿ 83 ವರ್ಷದ ರಾಮ್ದೀನ್ ಮತ್ತು 74 ವರ್ಷದ ಕೇದಾರ್ ನಾಥ್ ಶ್ರೀವಾಸ್ತವ ಸೇರಿದ್ದಾರೆ.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜನರ ಮನಸ್ಸಿನಲ್ಲಿ ಭಯ ಮತ್ತು ಅನಿಶ್ಚಿತತೆಯ ವಾತಾವರಣವಿತ್ತು. ಬಲವಂತದ ಭಯ ಹೇರಿಕೆ ಸಾರ್ವತ್ರಿಕ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ವಿರುದ್ಧ ಜನಾದೇಶ ನೀಡುವಂತೆ ಮಾಡಿತು ಎಂದು ರಾಮದೀನ್ ಹೇಳುತ್ತಾರೆ. 

ಉತ್ತರ ಪ್ರದೇಶ ವಿಧಾನಸಭೆಯ ಮಾಜಿ ಸ್ಪೀಕರ್ ಹೃದಯ ನಾರಾಯಣ ದೀಕ್ಷಿತ್ ಅವರು ಈ ಅವಧಿಯಲ್ಲಿ ತಮ್ಮ ಸೆರೆವಾಸವನ್ನು ನೆನಪಿಸಿಕೊಳ್ಳುತ್ತಾರೆ. ನನ್ನನ್ನು ಉನ್ನಾವ್ ಜೈಲಿನಲ್ಲಿ ಇರಿಸಲಾಗಿತ್ತು. ಸಂಸತ್ತಿನ ಚುನಾವಣೆ ಘೋಷಣೆಯಾಯಿತು. ನಾವು ಕಾಂಗ್ರೆಸ್ ಮತ್ತು ಇಂದಿರಾಗಾಂಧಿ ಸೋಲಬೇಕೆಂದು ಇಚ್ಛೆಪಟ್ಟಿದ್ದೆವು. ಮತ ಎಣಿಕೆಯ ರಾತ್ರಿ ನಾನು ಹೇಗಾದರೂ ರೇಡಿಯೊ ಮೂಲಕ ಚುನಾವಣಾ ಫಲಿತಾಂಶ ತಿಳಿಯಬೇಕೆಂದು ಪ್ರಯತ್ನಿಸುತ್ತಿದ್ದೆ.

ತಡರಾತ್ರಿ ಡೆಪ್ಯುಟಿ ಜೈಲರ್ ಬಂದು ‘ಅಗರ್ ಟ್ರಾನ್ಸಿಸ್ಟರ್ ಮಿಲಾ ತೋ ದಂಡಾ ಕರ್ದೂಂಗಾ’ (ನಿಮ್ಮಲ್ಲಿ ರೇಡಿಯೊ ಕಂಡರೆ ಕೋಲಿನಿಂದ ಹೊಡೆಯುತ್ತಾರೆ) ಎಂದರು. ಮುಂಜಾನೆ 4 ಗಂಟೆ ಸುಮಾರಿಗೆ ಇಂದಿರಾಗಾಂಧಿ ಚುನಾವಣೆಯಲ್ಲಿ ಸೋತ ಸುದ್ದಿ ತಿಳಿಯಿತು. ರಾಯ್ ಬರೇಲಿಯಲ್ಲಿ ಅದೇ ಡೆಪ್ಯುಟಿ ಜೈಲರ್ ನನ್ನ ಕಡೆ ಓಡಿ ಬಂದು 'ಬಧಾಯಿ ಹೋ, ಸರ್' (ಅಭಿನಂದನೆಗಳು) ಎಂದು ಹೇಳಿದರು. ಇಷ್ಟು ಬೇಗ ನಿಮ್ಮ ಸ್ವರ ಹೇಗೆ ಬದಲಾಯಿತು ಎಂದು ನಾನು ಕೇಳಿದಾಗ, ಅವರು 'ನೀವು ಸರ್ಕಾರ ರಚಿಸುತ್ತಿದ್ದೀರಿ' ಎಂದು ಹೇಳಿದರು ಎನ್ನುತ್ತಾರೆ ಅಂದಿನ ಜನ ಸಂಘದ ನಾಯಕ ಹೃದಯ್ ನಾರಾಯಣ್ ದೀಕ್ಷಿತ್.

ಯಾವುದೇ ಸಮಸ್ಯೆ ಇಲ್ಲದಿದ್ದರೂ ಆಂತರಿಕ ಗೊಂದಲದ ನೆಪದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ ಎಂದರು.ಅದು ತುರ್ತು ಪರಿಸ್ಥಿತಿ ಹೇರಿದ್ದಾಗ ದೇಶ ಸಿದ್ದವಾಗಿರಲಿಲ್ಲ ಹಿಂದೆಂದೂ ಸಂಭವಿಸಿರಲಿಲ್ಲ. ಹೊಸ ಪೀಳಿಗೆಯು ಇದರ ಬಗ್ಗೆ ತಿಳಿದುಕೊಳ್ಳಬೇಕು ಇದರಿಂದ ಭವಿಷ್ಯದಲ್ಲಿ ಯಾವುದೇ ಆಡಳಿತಗಾರನು ಇಂತಹ ಕೃತ್ಯವನ್ನು ಎಸಗುವ ಧೈರ್ಯವನ್ನು ಪಡೆಯುವುದಿಲ್ಲ" ಎಂದು 76 ವರ್ಷದ ದೀಕ್ಷಿತ್ ಹೇಳುತ್ತಾರೆ. 

ಸಿದ್ಧಾರ್ಥನಗರ ಜಿಲ್ಲೆಯ ಇಟ್ವಾದಿಂದ ಸಮಾಜವಾದಿ ಪಕ್ಷದ ಹಿರಿಯ ಶಾಸಕ ಮಾತಾ ಪ್ರಸಾದ್ ಪಾಂಡೆ ಅವರು ತುರ್ತು ಪರಿಸ್ಥಿತಿಯ ದಿನಗಳಲ್ಲಿ "ಅನಿಶ್ಚಿತತೆ ಮತ್ತು ಭಯ" ಇತ್ತು ಎಂದು ಪಿಟಿಐ ಸುದ್ದಿಸಂಸ್ಥೆಗೆ ಹೇಳುತ್ತಾರೆ. 

ಉತ್ತರ ಪ್ರದೇಶ ವಿಧಾನಸಭೆಯ ಮಾಜಿ ಸ್ಪೀಕರ್ ಪಾಂಡೆ ಅವರನ್ನು ಬಸ್ತಿ ಜೈಲಿನಲ್ಲಿ ಇರಿಸಲಾಗಿತ್ತು. ತುರ್ತು ಪರಿಸ್ಥಿತಿಯನ್ನು ಉಲ್ಲೇಖಿಸಿದ ಅವರು, ಪೊಲೀಸರು ಜನರಿಗೆ ಕಿರುಕುಳ ನೀಡುತ್ತಿದ್ದರು. ಜನರು ಮರಗಳ ಮೇಲೆ ಅಥವಾ ಕಬ್ಬಿನ ಗದ್ದೆಗಳಲ್ಲಿ ಭಯದಿಂದ ಅಡಗಿಕೊಳ್ಳುತ್ತಿದ್ದರು ಎಂದರು.

"ಆದಾಗ್ಯೂ, ಆ ಸಮಯದಲ್ಲಿ ನಾಯಕರನ್ನು ಮಾತ್ರ ಬಂಧಿಸಲಾಯಿತು ಅವರ ಕುಟುಂಬ ಸದಸ್ಯರಿಗೆ ಕಿರುಕುಳ ನೀಡುತ್ತಿರಲಿಲ್ಲ ಎಂದು 70 ವರ್ಷದ ಪಾಂಡೆ ಹೇಳುತ್ತಾರೆ. 

SCROLL FOR NEXT