ದೇಶ

ಸಚಿವರನ್ನು ವಜಾಗೊಳಿಸುವ ಅಧಿಕಾರ ರಾಜ್ಯಪಾಲರಿಗಿಲ್ಲ; ಕಾನೂನು ಹೋರಾಟ ನಡೆಸುತ್ತೇವೆ: ತಮಿಳುನಾಡು ಸಿಎಂ

Lingaraj Badiger

ಚೆನ್ನೈ: ತಮಿಳುನಾಡಿನ ಡಿಎಂಕೆ ಸರ್ಕಾರ ಮತ್ತು ರಾಜ್ಯಪಾಲ ಆರ್‌ಎನ್ ರವಿ ನಡುವಿನ ಸಂಘರ್ಷ ಗುರುವಾರ ಮತ್ತಷ್ಟು ಹೆಚ್ಚಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ವಿ ಸೆಂಥಿಲ್ ಬಾಲಾಜಿ ಅವರನ್ನು ಸಚಿವ ಸಂಪುಟದಿಂದ ರಾಜ್ಯಪಾಲರು ವಜಾಗೊಳಿಸಿದ್ದಾರೆ.

ಯಾವುದೇ ಖಾತೆ ಇಲ್ಲದೆ ಸಚಿವರಾಗಿ ಮುಂದುವರಿದಿದ್ದ ಬಾಲಾಜಿ ಅವರನ್ನು ಮುಖ್ಯಮಂತ್ರಿಗಳ ಶಿಫಾರಸು ಇಲ್ಲದೆ ರಾಜ್ಯಪಾಲರು ಸಚಿವರನ್ನು ವಜಾಗೊಳಿಸಿರುವುದು ಬಹುಶಃ ಇದೇ ಮೊದಲು.

ರಾಜ್ಯಪಾಲ ರವಿ ಅವರು, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಸಂಪರ್ಕಿಸದೆಯೇ ಜೈಲಿನಲ್ಲಿರುವ ಸಚಿವ ವಿ ಸೆಂಥಿಲ್ ಬಾಲಾಜಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ರಾಜ್ಯಪಾಲರ ಈ ವಿವಾದಾತ್ಮಕ ನಡೆಯನ್ನು ಡಿಎಂಕೆ ಸರ್ಕಾರ ತೀವ್ರವಾಗಿ ಖಂಡಿಸಿದೆ. 

ಸಚಿವರನ್ನು ಸಂಪುಟದಿಂದ ವಜಾಗೊಳಿಸುವ ಅಧಿಕಾರ ರಾಜ್ಯಪಾಲ ರವಿ ಅವರಿಗೆ ಇಲ್ಲ. ನಾವು ಇದರ ವಿರುದ್ಧ ಕಾನೂನಾತ್ಮಕವಾಗಿ ಹೋರಾಡುತ್ತೇವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿದ್ದಾರೆ.

"ಸಚಿವ ವಿ ಸೆಂಥಿಲ್ ಬಾಲಾಜಿ ಅವರು ಉದ್ಯೋಗಕ್ಕಾಗಿ ಲಂಚ ಪಡೆದ ಹಗರಣ ಮತ್ತು ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಚಿವ ಸಂಪುಟದಿಂದ ವಜಾಗೊಳಿಸಿದ್ದಾರೆ" ಎಂದು ತಮಿಳುನಾಡು ರಾಜಭವನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

SCROLL FOR NEXT