ದೇಶ

ಮುಂಬೈನಲ್ಲಿ ಅದಾನಿ ಗ್ರೂಪ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ; ಬಂಧನ

Ramyashree GN

ಮುಂಬೈ: ಅದಾನಿ ಗ್ರೂಪ್ ಮತ್ತು ಅದರ ಅಧ್ಯಕ್ಷ ಗೌತಮ್ ಅದಾನಿ ವಿರುದ್ಧ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಕಟ್ಟಡದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾಗ ಮುಂಬೈ ಪೊಲೀಸರು ಸ್ಥಳೀಯ ಕಾಂಗ್ರೆಸ್ ನಾಯಕ ಭಾಯಿ ಜಗತಾಪ್ ಮತ್ತು ಪಕ್ಷದ ಇತರ ಹಲವಾರು ಕಾರ್ಯಕರ್ತರನ್ನು ಬುಧವಾರ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಿಳೆಯರು ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಲ್ಲಿರುವ ಎನ್‌ಎಸ್‌ಇ ಕಟ್ಟಡದ ಹೊರಗೆ ಜಮಾಯಿಸಿ ಅದಾನಿ ಗ್ರೂಪಿನ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು.

ನಂತರ, ಮುಂಬೈ ಪ್ರಾದೇಶಿಕ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಜಗತಾಪ್ ಸೇರಿದಂತೆ 40 ರಿಂದ 50 ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಬಂಧಿಸಿ ಬಿಕೆಸಿ, ಖೇರ್ವಾಡಿ ಮತ್ತು ನಿರ್ಮಲ್ ನಗರ ಪೊಲೀಸ್ ಠಾಣೆಗಳಿಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.

ಬಾಂಬೆ ಪೊಲೀಸ್ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದ್ದು, ಪ್ರತಿಭಟನಾಕಾರರನ್ನು ನಂತರ ಬಿಡಲಾಯಿತು. ಯಾರನ್ನೂ ಬಂಧಿಸಿಲ್ಲ ಎಂದು ಅಧಿಕಾರಿ ಹೇಳಿದರು.

ಗೌತಮ್ ಅದಾನಿ ಅವರ ಪಾಸ್‌ಪೋರ್ಟ್ ಅನ್ನು ವಶಪಡಿಸಿಕೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ. ಏಕೆಂದರೆ, ಅವರು (ಗೌತಮ್ ಅದಾನಿ) ವಜ್ರದ ವ್ಯಾಪಾರಿಗಳಾದ ಮೆಹುಲ್ ಚೋಕ್ಸಿ, ನೀರವ್ ಮೋದಿ ಮುಂತಾದವರ ರೀತಿ ದೇಶದಿಂದ ಫಲಾಯನ ಮಾಡಬಾರದು. ಅದಾನಿ ವಿಚಾರದಲ್ಲಿ ಸರ್ಕಾರ ಮೌನವಾಗಿರುವುದೇಕೆ?’ ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸಿದರು.

ಅದಾನಿ ಸಂಸ್ಥೆಗಳ ವಿರುದ್ಧ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆಯ ಆರೋಪಗಳಿವೆ. ಆದರೆ, ಅದಾನಿ ಗ್ರೂಪ್ ಈ ಆರೋಪಗಳನ್ನು ನಿರಾಕರಿಸಿದೆ.

SCROLL FOR NEXT