ದೇಶ

ದೆಹಲಿ ಅಬಕಾರಿ ನೀತಿ ಪ್ರಕರಣ: ಎಎಪಿಯಿಂದ ದುಬಾರಿ ವಕೀಲರ ನೇಮಕ, 21 ಕೋಟಿ ರೂ. ಸಾರ್ವಜನಿಕ ಹಣ ವ್ಯರ್ಥ!

Ramyashree GN

ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರವು ಅಬಕಾರಿ ಮದ್ಯ ನೀತಿ ಮೇಲಿನ ಆರೋಪಗಳನ್ನು ತಳ್ಳಿಹಾಕಿದೆ. ಆದರೆ, ಈಗ ಹಗರಣ ಬೆಳಕಿಗೆ ಬಂದ ನಂತರ, ಎಎಪಿ ತನ್ನ ಸಮರ್ಥನೆಗಾಗಿ ಮತ್ತು ಅದರ ನಾಯಕರ ರಕ್ಷಣೆಗಾಗಿ ದುಬಾರಿ ವಕೀಲರನ್ನು ನೇಮಿಸಿಕೊಂಡು ಸಾರ್ವಜನಿಕ ಹಣವನ್ನು ವ್ಯರ್ಥ ಮಾಡುತ್ತಿದೆ ಎಂದು ದೆಹಲಿ ಬಿಜೆಪಿ ವಕ್ತಾರ ಹರೀಶ್ ಖುರಾನಾ ಆರೋಪಿಸಿದ್ದಾರೆ. 

ಹೊಸ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಸಾವಿರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ದೆಹಲಿ ಬಿಜೆಪಿ ಯಾವಾಗಲೂ ಹೇಳುತ್ತಲೇ ಬಂದಿದೆ ಮತ್ತು ಇಂದು ಕೇಜ್ರಿವಾಲ್ ಸರ್ಕಾರವು ವಕೀಲರನ್ನು ನೇಮಿಸಿಕೊಳ್ಳಲು 21.5 ಕೋಟಿ ರೂಪಾಯಿ ವೆಚ್ಚ ಮಾಡಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಖುರಾನಾ ಹೇಳಿದರು.

ಮದ್ಯದ ಹಗರಣದಿಂದ ತಪ್ಪಿಸಿಕೊಳ್ಳಲು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ಕಾಂಗ್ರೆಸ್ ನಾಯಕ ಮತ್ತು ವಕೀಲ ಅಭಿಷೇಕ್ ಮನು ಸಿಂಘ್ವಿ ಅವರಿಗೆ 18.97 ಕೋಟಿ ರೂಪಾಯಿಗಳನ್ನು ಪ್ರಕರಣವನ್ನು ಕಾನೂನುಬದ್ಧವಾಗಿ ಎದುರಿಸಲು ನೀಡಿದ್ದಾರೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

'ಎಎಪಿಯು ಅಬಕಾರಿ ನೀತಿ ಹಗರಣ ಪ್ರಕರಣವನ್ನು ವಾದಿಸಲು ವಕೀಲರಿಗೆ ಸುಮಾರು 21.5 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಹೀಗಿರುವಾಗ, ಇದು ಎಷ್ಟು ದೊಡ್ಡ ಹಗರಣವಾಗಿದೆ ಎಂಬುದು ಕಳವಳಕಾರಿ ಸಂಗತಿಯಾಗಿದೆ ಎಂದು ಖುರಾನಾ ಹೇಳಿದರು.

ವಕೀಲರಿಗೆ ಖರ್ಚು ಮಾಡಿರುವ 21 ಕೋಟಿ ರೂಪಾಯಿಯನ್ನು ಎಎಪಿ ಸರ್ಕಾರದ ಖಜಾನೆಯಿಂದ ಠೇವಣಿ ಇಡಬೇಕು ಎಂದು ದೆಹಲಿ ಬಿಜೆಪಿ ಆಗ್ರಹಿಸಿದೆ.

SCROLL FOR NEXT