ದೇಶ

ನನ್ನ ಫೋನ್‌ನಲ್ಲೂ ಪೆಗಾಸಸ್ ಇತ್ತು, ಕಾಲ್ ರೆಕಾರ್ಡ್ ಆಗುತ್ತಿತ್ತು: ಕೇಂಬ್ರಿಡ್ಜ್ ವಿವಿಯಲ್ಲಿ ರಾಹುಲ್ ಗಾಂಧಿ

Srinivasamurthy VN

ಲಂಡನ್: ನನ್ನ ಫೋನ್‌ನಲ್ಲೂ ಪೆಗಾಸಸ್ ಇತ್ತು, ಕಾಲ್ ರೆಕಾರ್ಡ್ ಆಗುತ್ತಿತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಕೇಂಬ್ರಿಜ್ ವಿಶ್ವವಿದ್ಯಾಲಯದ ಉಪನ್ಯಾಸದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪೆಗಾಸಸ್ ಬೇಹುಗಾರಿಕಾ ಕುತಂತ್ರಾಂಶದ ವಿವಾದವನ್ನು ಪ್ರಸ್ತಾಪಿಸಿದ್ದು, 'ತಾವೂ ಸೇರಿದಂತೆ ಭಾರತದ ಹಲವು ರಾಜಕಾರಣಿಗಳ ಮೊಬೈಲ್‌ಗಳಲ್ಲಿ ಪೆಗಾಸಸ್ ಸಾಫ್ಟ್‌ವೇರ್ ಅನ್ನು ಸ್ಥಾಪಿಸಲಾಗಿತ್ತು. ಗುಪ್ತಚರ ಅಧಿಕಾರಿಗಳು ನನ್ನನ್ನು ಕರೆದು, ನೀವು ಪೋನ್‌ನಲ್ಲಿ ಮಾತನಾಡುವಾಗ ದಯವಿಟ್ಟು ಜಾಗರೂಕರಾಗಿರಿ. ನಿಮ್ಮ ಕರೆಗಳನ್ನು ನಾವು ರೆಕಾರ್ಡ್ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದರು ಎಂದು ಹೇಳಿದ್ದಾರೆ.

ತನಿಖಾ ಸಂಸ್ಥೆಗಳ ದುರುಪಯೋಗದ ಬಗ್ಗೆ ಕೇಂದ್ರದ ಮೇಲೆ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ‘ಪ್ರತಿಪಕ್ಷಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಕ್ರಿಮಿನಲ್ ಪ್ರಕರಣಗಳ ಅಡಿಯಲ್ಲಿ ಬಾರದ ವಿಷಯಗಳಲ್ಲಿಯೂ ನನ್ನ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಮಾಧ್ಯಮಗಳು ಮತ್ತು ಪ್ರಜಾಪ್ರಭುತ್ವದ ಮೇಲೆ ಈ ರೀತಿಯ ಆಕ್ರಮಣ ನಡೆಯುತ್ತಿರುವಾಗ ಪ್ರತಿಪಕ್ಷಗಳು ಜನರೊಂದಿಗೆ ಸಂವಹನ ನಡೆಸುವುದು ತುಂಬಾ ಕಷ್ಟ’ಎಂದು ರಾಹುಲ್ ಗಾಂಧಿ ಹೇಳಿದರು.

'ಎಲ್ಲರಿಗೂ ತಿಳಿದಿದೆ..ಭಾರತೀಯ ಪ್ರಜಾಪ್ರಭುತ್ವವು ಒತ್ತಡ ಮತ್ತು ಆಕ್ರಮಣದಲ್ಲಿದೆ ಎಂದು.. ನಾನು ಭಾರತದಲ್ಲಿ ವಿರೋಧ ಪಕ್ಷದ ನಾಯಕ.. ಪ್ರಜಾಪ್ರಭುತ್ವಕ್ಕೆ ಅಗತ್ಯವಿರುವ ಸಾಂಸ್ಥಿಕ ಚೌಕಟ್ಟು ಸಂಸತ್ತು, ಮುಕ್ತ ಪತ್ರಿಕಾ, ನ್ಯಾಯಾಂಗ, ಕೇವಲ ಕ್ರೋಢೀಕರಣದ ಕಲ್ಪನೆ, ಚಲಿಸುವ -- ಎಲ್ಲವೂ ನಿರ್ಬಂಧಿತವಾಗುತ್ತಿವೆ. ಹಾಗಾಗಿ, ನಾವು ಭಾರತೀಯ ಪ್ರಜಾಪ್ರಭುತ್ವದ ಮೂಲ ರಚನೆಯ ಮೇಲೆ ದಾಳಿಯನ್ನು ಎದುರಿಸುತ್ತಿದ್ದೇವೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ರಾಜಕಾರಣಿಗಳು ಮತ್ತು ಇತರರ ಮೇಲೆ ಬೇಹುಗಾರಿಕೆ ನಡೆಸಲು ಸರ್ಕಾರ ಪೆಗಾಸಸ್ ಕುತಂತ್ರಾಂಶ ಬಳಸುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಕಳೆದ ವರ್ಷದ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಸಮಿತಿಯನ್ನು ರಚಿಸಿತ್ತು. ಆದರೆ, 29 ಮೊಬೈಲ್ ಫೋನ್‌ಗಳಲ್ಲಿ ಪೆಗಾಸಸ್ ಪತ್ತೆಯಾಗಿಲ್ಲ. ಐದು ಫೋನ್‌ಗಳಲ್ಲಿ ಮಾತ್ರ ಇತ್ತು ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ಇಸ್ರೇಲ್‌ನ ಎನ್‌ಎಸ್ಒ ಸಮೂಹವು ಪೆಗಾಸಸ್ ಬೇಹುಗಾರಿಕೆಯ ಅಪ್ಲಿಕೇಶನ್‌ಗಳನ್ನು ಸಿದ್ಧಪಡಿಸಿತ್ತು. ಜಾಗತಿಕವಾಗಿ ಮಾನವ ಹಕ್ಕು ಹೋರಾಟಗಾರರು, ರಾಜಕಾರಣಿಗಳು, ಪತ್ರಕರ್ತರು ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರ ವಿರುದ್ಧ ಸರ್ಕಾರಗಳು ಪೆಗಾಸಸ್ ಅಪ್ಲಿಕೇಶನ್ ಬಳಸಿ ಗೂಢಚಾರಿಕೆ ನಡೆಸುತ್ತಿದೆ ಎಂದು ಆರೋಪಿಸಲಾಗಿತ್ತು.
 

SCROLL FOR NEXT