ದೇಶ

70 ತರಬೇತಿ ವಿಮಾನ ಖರೀದಿಗೆ ಹೆಚ್ ಎಎಲ್‌ನೊಂದಿಗೆ ರಕ್ಷಣಾ ಸಚಿವಾಲಯ ಒಪ್ಪಂದಕ್ಕೆ ಸಹಿ

Nagaraja AB

ನವದೆಹಲಿ: ಭಾರತೀಯ ವಾಯುಪಡೆಗೆ ರೂ. 6,800 ಕೋಟಿ ಮೊತ್ತದ 70 ಹೆಚ್ ಟಿಟಿ -40 ಬೇಸಿಕ್ ತರಬೇತಿ ವಿಮಾನಗಳ ಖರೀದಿಗೆ ರಕ್ಷಣಾ ಸಚಿವಾಲಯ ಮಂಗಳವಾರ ಹೆಚ್ ಎಎಲ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. 3,100 ಕೋಟಿ ಮೌಲ್ಯದ ಮೂರು ಕೆಡೆಟ್ ತರಬೇತಿ ಹಡಗುಗಳ ಸ್ವಾಧೀನಕ್ಕೆ ಲಾರ್ಸೆನ್ ಮತ್ತು ಟೂಬ್ರೊ ಲಿಮಿಟೆಡ್ (ಎಲ್ & ಟಿ) ನೊಂದಿಗೆ ಒಪ್ಪಂದವನ್ನು ರಕ್ಷಣಾ ಸಚಿವಾಲಯ ಅಂತಿಮಗೊಳಿಸಿದೆ. 

ಮಾರ್ಚ್ 1 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆ ಕುರಿತ ಸಂಪುಟ ಸಮಿತಿಯಲ್ಲಿ ಈ ಎರಡು ಖರೀದಿ ಪ್ರಸ್ತಾವನೆಗಳನ್ನು ಅನುಮೋದಿಸಲಾಗಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ಬೇಸಿಕ್ ತರಬೇತಿ ವಿಮಾನಗಳ ಖರೀದಿ ಮತ್ತು ಮೂರು ಕೆಡೆಟ್ ತರಬೇತಿ ಹಡಗುಗಳ ಖರೀದಿಗೆ ಇಂದು ರಕ್ಷಣಾ ಸಚಿವಾಲಯ ಹೆಚ್ ಎಎಲ್ ಮತ್ತು ಎಲ್ ಅಂಡ್ ಟಿ ಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಯಿತು ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಹೆಚ್ ಎಎಲ್ ಆರು ವರ್ಷಗಳ ಅವಧಿಯಲ್ಲಿ 70 ಹೆಚ್ ಟಿಟಿ-40 ವಿಮಾನಗಳನ್ನು ಪೂರೈಸಿದರೆ, 2026 ರಿಂದ ಹಡಗುಗಳ ಪೂರೈಕೆ ಆರಂಭವಾಗಲಿದೆ. ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ, ಸಚಿವಾಲಯದ ಇತರ ಹಿರಿಯ ನಾಗರಿಕ ಮತ್ತು ಮಿಲಿಟರಿ ಅಧಿಕಾರಿಗಳು ಮತ್ತು ಹೆಚ್ ಎಎಲ್ ಮತ್ತುಎಲ್ ಅಂಡ್ ಟಿ ಪ್ರತಿನಿಧಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು. 

ಹೆಚ್ ಟಿಟಿ-40 ಒಂದು ಟರ್ಬೊ ಪ್ರಾಪ್ ವಿಮಾನವಾಗಿದ್ದು, ಉತ್ತಮ ಕಡಿಮೆ ವೇಗದ ಅತ್ಯುತ್ತಮ ನಿರ್ವಹಣೆ ಹೊಂದಿರುವುದಾಗಿ ರಕ್ಷಣಾ ಸಚಿವಾಲಯ ತಿಳಿಸಿದೆ. ಹಡಗುಗಳ ಸ್ವದೇಶದಲ್ಲಿಯೇ ಅಭಿವೃದ್ದಿಪಡಿಸಿದ್ದು,  ಈ ಯೋಜನೆಯಿಂದ ನಾಲ್ಕೂವರೆ  ವರ್ಷಗಳ ಅವಧಿಯಲ್ಲಿ 22.5 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸಚಿವಾಲಯ ತಿಳಿಸಿದೆ. 

SCROLL FOR NEXT