ದೇಶ

ಛತ್ತೀಸ್‌ಗಢ: ನಕ್ಸಲರೊಂದಿಗೆ ಗುಂಡಿನ ಕಾಳಗ, ಇಬ್ಬರು ಕೋಬ್ರಾ ಕಮಾಂಡೋಗಳಿಗೆ ಗಾಯ

Lingaraj Badiger

ರಾಯ್‌ಪುರ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಗುರುವಾರ ಭದ್ರತಾ ಸಿಬ್ಬಂದಿ ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಸಿಆರ್‌ಪಿಎಫ್‌ನ ಎಲೈಟ್ ಜಂಗಲ್ ವಾರ್‌ಫೇರ್ ಯುನಿಟ್ ಕೋಬ್ರಾದ ಇಬ್ಬರು ಕಮಾಂಡೋಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಕನಿಷ್ಠ ಅರ್ಧ ಡಜನ್ ನಕ್ಸಲರಿಗೆ ಗಾಯಗಳಾಗಿವೆ ಎಂದು ಅವರು ಹೇಳಿದ್ದಾರೆ.

"ಸಿಆರ್‌ಪಿಎಫ್‌ನ ವಿಶೇಷ ಕಾರ್ಯಪಡೆ(ಎಸ್‌ಟಿಎಫ್) ಮತ್ತು ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್(ಕೋಬ್ರಾ) ಜಂಟಿ ತಂಡ, ಡಬ್ಬಮಾರ್ಕಾ ಶಿಬಿರದಿಂದ ಸಕ್ಲರ್ ಕಡೆಗೆ ಕಾರ್ಯಾಚರಣೆ ಆರಂಭಿಸಿದ ನಂತರ ಬಳಿಗ್ಗೆ 9 ಗಂಟೆ ಸುಮಾರಿಗೆ ಗುಂಡಿನ ಚಕಮಕಿ ನಡೆಯಿತು ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಶರ್ಮಾ ಪಿಟಿಐಗೆ ತಿಳಿಸಿದ್ದಾರೆ.

"ಕೋಬ್ರಾದ 202ನೇ ಮತ್ತು 208ನೇ ಬೆಟಾಲಿಯನ್‌ನ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಎನ್‌ಕೌಂಟರ್ ಸುಮಾರು 45 ನಿಮಿಷಗಳ ಕಾಲ ನಡೆಯಿತು ಮತ್ತು ಭದ್ರತಾ ಸಿಬ್ಬಂದಿಯನ್ನು ಕಂಡು ನಕ್ಸಲರು ದಟ್ಟ ಅರಣ್ಯಕ್ಕೆ ಪರಾರಿಯಾಗಿದ್ದಾರೆ" ಎಂದು ಅವರು ಹೇಳಿದ್ದಾರೆ.

ಎನ್‌ಕೌಂಟರ್ ನಂತರ ಸ್ಥಳದಿಂದ ಬಿಜಿಎಲ್(ಬ್ಯಾರೆಲ್ ಗ್ರೆನೇಡ್ ಲಾಂಚರ್) ಶೆಲ್‌ಗಳು ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

"ಕೋಬ್ರಾದ 202ನೇ ಬೆಟಾಲಿಯನ್‌ನ ಇನ್‌ಸ್ಪೆಕ್ಟರ್ ಮುನೇಶ್ ಕುಮಾರ್ ಮೀನಾ ಮತ್ತು ಕೋಬ್ರಾದ 208ನೇ ಬೆಟಾಲಿಯನ್‌ನ ಕಾನ್‌ಸ್ಟೆಬಲ್ ಅಮಿತ್ ಮೋದಕ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ" ಎಂದು ಎಸ್‌ಪಿ ತಿಳಿಸಿದ್ದಾರೆ.

SCROLL FOR NEXT