ದೇಶ

ಆಪ್ ಸಚಿವ ಮನೀಶ್ ಸಿಸೋಡಿಯಾ ಟ್ವಿಟರ್ ಖಾತೆ ಬ್ಲಾಕ್ ಮಾಡಿ: ಟ್ವಿಟರ್'ಗೆ ಬಿಜೆಪಿ ಆಗ್ರಹ

Manjula VN

ನವದೆಹಲಿ: ಆಪ್‌ ಸಚಿವ ಮನೀಶ್‌ ಸಿಸೋಡಿಯಾ ಅವರ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡುವಂತೆ ಟ್ವಿಟ್ಟರ್‌ ಸಿಇಒ ಎಲಾನ್‌ ಮಸ್ಕ್‌ ಅವರಿಗೆ ಬಿಜೆಪಿ ಆಗ್ರಹಿಸಿದೆ.

ಬಂಧನದಲ್ಲಿದ್ದರೂ ಮನೀಶ್ ಸಿಸೋಡಿಯಾ ಅವರ ಅಧಿಕೃತ ಟ್ವಿಟರ್ ಖಾತೆಯಿಂದ ಬುಧವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸುವ ಟ್ವೀಟ್ ವೊಂದು ಪೋಸ್ಟ್ ಆಗಿತ್ತು. ಈ ಟ್ವೀಟ್ ವೈರಲ್ ಆಗಿತ್ತು.

ಶಾಲೆಗಳು ತೆರೆದಲೆ ಜೈಲು ಬಂದ್ ಆಗುತ್ತವೆ ಎಂಬ ಮಾತನ್ನು ಕೇಳಿದ್ದೆ. ಆದರೆ, ಇದೀಗ ಶಾಲೆಗಳನ್ನು ತೆರೆಯುವವರನ್ನು ಮಾತ್ರ ಜೈಲಿಗೆ ಹಾಕುತ್ತಿರುವುದನ್ನು ಕೇಳುತ್ತಿದ್ದೇನೆಂದು ಟ್ವೀಟ್ ಮಾಡಿರುವುದು ಕಂಡು ಬಂದಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ತಜೀಂದರ್ ಬಗ್ಗಾ ಅವರು, ಸಿಸೋಡಿಯಾ ಅವರ ಖಾತೆಯನ್ನು ಬ್ಲಾಕ್ ಮಾಡುವಂತೆ ಎಲೋನ್ ಮಸ್ಕ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಟ್ವೀಟ್ ನ್ನು ಎಲಾನ್ ಮಸ್ಕ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

“ಮನೀಶ್ ಸಿಸೋಡಿಯಾ ಒಬ್ಬ ಕ್ರಿಮಿನಲ್. ಅವರ ಬದಲಾಗಿ ಬೇರೊಬ್ಬರು ಅವರ ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ಅವರ ಖಾತೆಯನ್ನು ದಯವಿಟ್ಟು ನಿರ್ಬಂಧಿಸಿ ಎಂದು ಹೇಳಿದ್ದಾರೆ.

ಬಂಂಧನದ ಬಳಿಕ ಸಿಸೋಡಿಯೋ ಅವರ ಟ್ವಿಟರ್ ಖಾತೆಯನ್ನು ಮನೀಶ್ ಸಿಸೋಡಿಯೋ ಅವರ ತಂಡವು ನಿರ್ವಹಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಎಎಪಿ ನಾಯಕ ಸತ್ಯೇಂದ್ರ ಜೈನ್ ಅವರ ಖಾತೆಯ ಬ್ಲೂ ಟಿಕ್ ಟ್ವಿಟರ್ ಹಿಂಪಡೆದಿತ್ತು. ಆದರೆ, ಇದರ ಹಿಂದಿನ ಕಾರಣವನ್ನು ಟ್ವಿಟರ್ ತಿಳಿಸಿರಲಿಲ್ಲ.

ದೀರ್ಘಕಾಲದವರೆಗೆ ಯಾವುದೇ ಪೋಸ್ಟ್ ಗಳು ಬಾರದ ಹಿನ್ನೆಲೆಯಲ್ಲಿ ಖಾತೆ ನಿಷ್ಕ್ರಿಯಗೊಂಡಿರಬಹುದು ಎಂದು ಕೆಲ ಎಎಪಿ ನಾಯಕರು ಹೇಳಿದ್ದಾರೆ.

ಏತನ್ಮಧ್ಯೆ, ಕೇಂದ್ರ ದೆಹಲಿಯಲ್ಲಿರುವ ಎಎಪಿಯ ಪ್ರಧಾನ ಕಚೇರಿಯ ಹೊರಗೆ ದೆಹಲಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಗುರುವಾರ ಘೋಷಿಸಿವೆ.

ದೆಹಲಿ ಬಿಜೆಪಿ ಕಾರ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಮತ್ತು ರಾಮ್‌ವೀರ್ ಸಿಂಗ್ ಬಿಧುರಿ ಸೇರಿದಂತೆ ಇತರೆ ಹಿರಿಯ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿದುಬಂದಿದೆ.

ಸಿಸೋಡಿಯಾ ಹತ್ಯೆಗೆ ಕೇಜ್ರಿವಾಲ್ ಸಂಚು ರೂಪಿಸಿದ್ದಾರೆ: ಬಿಜೆಪಿ ಆರೋಪ
ಮನೀಶ್ ಸಿಸೋಡಿಯಾ ಅವರನ್ನು ಹತ್ಯೆ ಮಾಡಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಂಚು ರೂಪಿಸಿದ್ದಾರೆಂದು ಬಿಜೆಪಿ ಆರೋಪಿಸಿದೆ.

ಸರ್ಕಾರದ ನಿರ್ದೇಶನದಂತೆ ಜೈಲಿನಲ್ಲಿನ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಕೇಜ್ರಿವಾಲ್ ಸೂಚನೆ ಮೇರೆಗೆ ಅವರು, ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾದರೆ ಸಿಸೋಡಿಯಾ ಅವರ ಜೀವಕ್ಕೆ ಅಪಾಯವಿದೆಯೇ? ಜೈಲಿನಲ್ಲಿರುವ ಸಿಸೋಡಿಯಾ ಅವರಿಗೆ ಭದ್ರತೆಯನ್ನು ಹೆಚ್ಚಿಸಬೇಕು ಎಂದು ಬಿಜೆಪಿ ಸಂಸದ ಮನೋಜ್ ತಿವಾರಿಯವರು ಆಗ್ರಹಿಸಿದ್ದಾರೆ.

ಈ ನಡುವೆ ಹೇಳಿಕೆಯನ್ನು ತಳ್ಳಿಹಾಕಿರುವ ಎಎಪಿ, ತಿಹಾರ್ ಜೈಲು ಸರ್ಕಾರದ ಅಡಿಯಲ್ಲಿದೆ ನಿಜ. ಆದರೆ, ಅದರ ಪೊಲೀಸ್ ಮಹಾನಿರ್ದೇಶಕರು ಲೆಫ್ಟಿನೆಂಟ್ ಗವರ್ನರ್'ಗೆ ವರದಿ ಸಲ್ಲಿಸುತ್ತಾರೆಂದು ಹೇಳಿದೆ.

SCROLL FOR NEXT