ದೇಶ

ಸಂಸತ್ತಿಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ವೈಎಸ್‌ಆರ್‌ಟಿಪಿ ಮುಖ್ಯಸ್ಥೆ ವೈಎಸ್ ಶರ್ಮಿಳಾ ಬಂಧನ

Ramyashree GN

ನವದೆಹಲಿ: ತೆಲಂಗಾಣ ಸರ್ಕಾರದ ಆಪಾದಿತ ಕಾಳೇಶ್ವರಂ ಏತ ನೀರಾವರಿ ಯೋಜನೆ ಹಗರಣದ ವಿರುದ್ಧ ಪ್ರತಿಭಟನೆ ನಡೆಸಲು ವೈಎಸ್‌ಆರ್ ತೆಲಂಗಾಣ ಪಕ್ಷದ (ವೈಎಸ್‌ಆರ್‌ಟಿಪಿ) ಮುಖ್ಯಸ್ಥೆ ವೈಎಸ್ ಶರ್ಮಿಳಾ ಮತ್ತು ಅವರ ಕಾರ್ಯಕರ್ತರು ಸಂಸತ್ತಿನತ್ತ ಮೆರವಣಿಗೆ ಆರಂಭಿಸಿದ ನಂತರ ದೆಹಲಿ ಪೊಲೀಸರು ಮಂಗಳವಾರ ಅವರನ್ನು ಬಂಧಿಸಿದ್ದಾರೆ.

ಪ್ರತಿಯೊಬ್ಬ ಭಾರತೀಯನೂ ಈ ಭ್ರಷ್ಟಾಚಾರವನ್ನು ತಿಳಿದುಕೊಳ್ಳಬೇಕು. ಈ ಹಗರಣವು ಭಾರತದ ಅತಿದೊಡ್ಡ ಹಗರಣವಾಗಿದೆ. ಈ ಹಗರಣದ ಪ್ರಮಾಣವನ್ನು ಸಂಸತ್ತಿನ ಗಮನಕ್ಕೆ ತರಲು ವೈಎಸ್‌ಆರ್ ತೆಲಂಗಾಣ ಪಕ್ಷವು ಸಂಸತ್ತಿನವರೆಗೆ ಮೆರವಣಿಗೆ ನಡೆಸಲು ನಿರ್ಧರಿಸಿದೆ ಎಂದು ಶರ್ಮಿಳಾ ದೆಹಲಿಯ ಜಂತರ್ ಮಂತರ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ತನ್ನ ತಂದೆ, ಸಂಯುಕ್ತ ಆಂಧ್ರಪ್ರದೇಶದ ದಿವಂಗತ ಮುಖ್ಯಮಂತ್ರಿ ಡಾ. ವೈಎಸ್ ರಾಜಶೇಖರ್ ರೆಡ್ಡಿ ಅವರು ಮೂಲತಃ ಯೋಜಿಸಿದ್ದ ಈ ಕಾಳೇಶ್ವರಂ ಏತ ನೀರಾವರಿ ಯೋಜನೆಯಲ್ಲಿ ಹಲವಾರು ಅಕ್ರಮಗಳಿವೆ ಎಂದು ಅವರು ಹೇಳಿದರು.

15 ವರ್ಷಗಳ ಹಿಂದೆ ಈ ಯೋಜನೆಯನ್ನು ಪ್ರಸ್ತಾಪಿಸಿದಾಗ 38,000 ಕೋಟಿ ರೂಪಾಯಿ ವೆಚ್ಚದಲ್ಲಿ 16 ಲಕ್ಷ ಎಕರೆ ಭೂಮಿಗೆ ನೀರುಣಿಸಲು ಉದ್ದೇಶಿಸಲಾಗಿತ್ತು. ಆದರೆ. ಕೆಸಿಆರ್ ಅಧಿಕಾರಕ್ಕೆ ಬಂದ ನಂತರ, ಅವರು ಈ ಯೋಜನೆಯ ವೆಚ್ಚವನ್ನು 38,000 ಕೋಟಿ ರೂ.ನಿಂದ 1.2 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದರು ಎಂದರು.

ವೈಎಸ್ಆರ್ ಅವರ ಯೋಜನೆಯು 16 ಲಕ್ಷ ಎಕರೆ ಭೂಮಿಗೆ ನೀರುಣಿಸಲು ಉದ್ದೇಶಿಸಿದ್ದರೆ, ನಮ್ಮ ಯೋಜನೆಯು 18 ಲಕ್ಷ ಎಕರೆ ಭೂಮಿಗೆ ನೀರುಣಿಸುತ್ತದೆ ಎಂದು ಕೆಸಿಆರ್ ಹೇಳಿದರು. ಹೀಗಾಗಿ ನನ್ನ ಪ್ರಶ್ನೆ ಏನೆಂದರೆ, ಕೇವಲ 2 ಲಕ್ಷ ಎಕರೆಗೆ ನೀರುಣಿಸಲು ನೀವು ಯೋಜನೆಯ ವೆಚ್ಚವನ್ನು ಮೂರು ಪಟ್ಟು ಹೆಚ್ಚು ಹೆಚ್ಚಿಸಿದ್ದೀರಿ. ನೀರಾವರಿ ಮಾಡುವುದು ಉದ್ದೇಶವಾದರೂ, ಅದು ಎಂದಿಗೂ ಅರ್ಧದಷ್ಟು ಭೂಮಿಗೆ ನೀರಾವರಿ ಮಾಡಿಲ್ಲ' ವೈಎಸ್‌ಆರ್‌ಟಿಪಿ ನಾಯಕಿ ತಿಳಿಸಿದ್ದಾರೆ.

ಕಾಳೇಶ್ವರಂ ಯೋಜನೆಯಿಂದ 1.5 ಲಕ್ಷ ಎಕರೆ ಭೂಮಿಗೆ ನೀರುಣಿಸಲಾಗಿದೆ ಎಂದು ಬಿಆರ್‌ಎಸ್ ಪಕ್ಷದ ಸಚಿವರೊಬ್ಬರು ರಾಜ್ಯ ವಿಧಾನಸಭೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಈಮಧ್ಯೆ, ಶರ್ಮಿಳಾ ಅವರನ್ನು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.

SCROLL FOR NEXT