ದೇಶ

ದೆಹಲಿ ಅಬಕಾರಿ ನೀತಿ ಹಗರಣ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ ಮುಂದೆ ಹಾಜರಾಗಲಿರುವ ಕೆ ಕವಿತಾ 

Ramyashree GN

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ತನಿಖಾ ಸಂಸ್ಥೆಯ ತನಿಖೆಗೆ ಸಂಬಂಧಿಸಿದಂತೆ ಬಿಆರ್‌ಎಸ್ ಎಂಎಲ್‌ಸಿ ಕೆ. ಕವಿತಾ ಅವರು ಗುರುವಾರ ಜಾರಿ ನಿರ್ದೇಶನಾಲಯದ (ಇ.ಡಿ) ಮುಂದೆ ಹಾಜರಾಗಲಿದ್ದಾರೆ.

ಮಾರ್ಚ್ 11 ರಂದು ಮೊದಲು ವಿಚಾರಣೆ ನಡೆಸಿದ ನಂತರ ಇ.ಡಿ ಮುಂದೆ ಅವರು ಹಾಜರಾಗುತ್ತಿರುವುದು ಎರಡನೇ ಸಲವಾಗಲಿದೆ.

ಗುರುವಾರ ತನಿಖೆಗೆ ಸೇರುವ ಮುನ್ನ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕವಿತಾ ಅವರು ರಾಷ್ಟ್ರ ರಾಜಧಾನಿಯ ತಮ್ಮ ಮನೆಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ.

ಮಹಿಳಾ ಉಪ ನಿರ್ದೇಶಕರ ಮಟ್ಟದ ಅಧಿಕಾರಿಯೊಬ್ಬರು ಪಿಎಂಎಲ್ಎಯ ಸೆಕ್ಷನ್ 50ರ ಅಡಿಯಲ್ಲಿ ಕವಿತಾ ಅವರ ಸಾಕ್ಷ್ಯವನ್ನು ದಾಖಲಿಸಲಿದ್ದಾರೆ.

‘ಹೈದರಾಬಾದ್ ಮೂಲದ ಉದ್ಯಮಿ ಅರುಣ್‌ ಪಿಳ್ಳೈ ಅವರು ರಾಬಿನ್‌ ಡಿಸ್ಟಿಲರೀಸ್‌ ಎಲ್ಎಲ್‌ಪಿ ಹೆಸರಿನ ಕಂಪನಿಯ ಪಾಲುದಾರರಾಗಿದ್ದು, ಕೆ.ಕವಿತಾ ಹಾಗೂ ಇತರರನ್ನು ಒಳಗೊಂಡ ‘ದಕ್ಷಿಣದ ಗುಂಪನ್ನು’ ಪ್ರತಿನಿಧಿಸುತ್ತಿದ್ದರು’ ಎಂದು ಇ.ಡಿ ಹೇಳಿದೆ. 

ಪಿಳ್ಳೈ ಮತ್ತೊಬ್ಬ ಆರೋಪಿ ಇಂಡೋಸ್ಪಿರಿಟ್‌ನ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಮಹೇಂದ್ರು ಅವರಿಂದ ಲಂಚವನ್ನು ಸಂಗ್ರಹಿಸಿ ಇತರ ಆರೋಪಿಗಳಿಗೆ ಹಸ್ತಾಂತರಿಸಿದ್ದಾರೆ. ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಳಸಿದ್ದಾರೆ ಎಂದು ಹೇಳಲಾದ 100 ಕೋಟಿ ರೂ. ಹಣವನ್ನು ಎಎಪಿ ನಾಯಕರಿಗೆ ಕಿಕ್‌ಬ್ಯಾಕ್ ನೀಡಲಾಗಿತ್ತು ಎಂದು ಇಡಿ ಆರೋಪಿಸಿದೆ.

ಪಿಳ್ಳೈ ಅವರು ಕವಿತಾ ಅವರ ಸಹವರ್ತಿ ಎಂದು ಹೇಳಿದ್ದಾರೆ. ಬುಧವಾರ, ಇಡಿ ಬಿಆರ್‌ಎಸ್ ಎಂಎಲ್‌ಸಿಯ ಮಾಜಿ ಆಡಿಟರ್ ಮತ್ತು ಸೌತ್ ಗ್ರೂಪ್‌ನ ಸದಸ್ಯ ಬುಚ್ಚಿ ಬಾಬು ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ.

ಮೂಲಗಳ ಪ್ರಕಾರ, ಕೇಂದ್ರದ ತನಿಖಾ ಸಂಸ್ಥೆಯು ಕವಿತಾ ಅವರನ್ನು ಗುರುವಾರ ಬುಚ್ಚಿ ಬಾಬು ಅವರೊಂದಿಗೆ ವಿಚಾರಣೆ ನಡೆಸುವ ಸಾಧ್ಯತೆಗಳಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಇಡಿಯಿಂದ ಬಂಧನಕ್ಕೊಳಗಾಗಿರುವ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ತಾನು ಎಂದಿಗೂ ಭೇಟಿ ಮಾಡಿಲ್ಲ ಎಂದು ಕವಿತಾ ಸಮರ್ಥಿಸಿಕೊಂಡಿದ್ದಾರೆ. ಈ ವಿಷಯದಲ್ಲಿ ತನ್ನ ಹೆಸರನ್ನು ಅನಗತ್ಯವಾಗಿ ಎಳೆಯಲಾಗುತ್ತಿದೆ ಎಂದು ಹೇಳಿದ್ದಾರೆ.

ಇ.ಡಿ ಪ್ರಕಾರ, ಅಬಕಾರಿ ನೀತಿ ಪ್ರಕರಣದಲ್ಲಿ ಸೌತ್ ಗ್ರೂಪ್‌ನ ಪ್ರತಿನಿಧಿಗಳಲ್ಲಿ ಕವಿತಾ ಕೂಡ ಒಬ್ಬರು.

SCROLL FOR NEXT