ದೇಶ

ಉತ್ತರ ಪ್ರದೇಶದಲ್ಲಿ ಕೋಲ್ಡ್ ಸ್ಟೋರೇಜ್ ಕುಸಿದು 14 ಮಂದಿ ಸಾವು; ಉತ್ತರಾಖಂಡದಲ್ಲಿ ಇಬ್ಬರು ಮಾಲೀಕರ ಬಂಧನ

Ramyashree GN

ಸಂಭಾಲ್: ಇಲ್ಲಿನ ಕೋಲ್ಡ್ ಸ್ಟೋರೇಜ್‌ನ ಕಟ್ಟಡದ ಛಾವಣಿ ಕುಸಿದು 14 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಸಂಬಂಧ ಇಬ್ಬರು ಮಾಲೀಕರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಉತ್ತರಾಖಂಡದ ಹಲ್ದ್ವಾನಿ ಜಿಲ್ಲೆಯಿಂದ ಇಬ್ಬರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಚಂಡೌಸಿ ಪೊಲೀಸ್ ಠಾಣೆ ವ್ಯಾಪ್ತಿಯ ಇಂದಿರಾ ರಸ್ತೆಯಲ್ಲಿ ಕುಸಿದ ಕಟ್ಟಡದ ಅವಶೇಷಗಳಿಂದ 24 ಜನರನ್ನು ಹೊರತೆಗೆಯಲಾಯಿತು ಮತ್ತು ಅವರಲ್ಲಿ 14 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಸಂಭವಿಸಿದ ಕುಸಿತದ ಹಿಂದಿನ ಕಾರಣಗಳನ್ನು ತನಿಖೆ ಮಾಡಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮಿತಿಯನ್ನು ರಚಿಸಿದ್ದಾರೆ.

ಕೋಲ್ಡ್ ಸ್ಟೋರೇಜ್ ಮಾಲೀಕರಾದ ಅಂಕುರ್ ಅಗರ್ವಾಲ್ ಮತ್ತು ರೋಹಿತ್ ಅಗರ್ವಾಲ್ ಅವರನ್ನು ಹಲ್ದ್ವಾನಿಯಿಂದ ಬಂಧಿಸಲಾಗಿದೆ ಎಂದು ಸಂಭಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಮನೀಶ್ ಬನ್ಸಾಲ್ ಶನಿವಾರ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.

ಪೊಲೀಸರು ಅಂಕುರ್ ಮತ್ತು ರೋಹಿತ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಗುರುವಾರ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರ ಪ್ರಕಾರ, ಮೂರು ತಿಂಗಳ ಹಿಂದೆ ಕುಸಿದ ಛಾವಣಿಯನ್ನು ಜಿಲ್ಲಾಡಳಿತದಿಂದ ಅಗತ್ಯ ಅನುಮತಿಯಿಲ್ಲದೆ ನಿರ್ಮಿಸಲಾಗಿದೆ ಮತ್ತು ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹವಾಗಿರುವ ಆಲೂಗಡ್ಡೆ ಪ್ರಮಾಣವು ಅದರ ನಿಗದಿತ ಸಾಮರ್ಥ್ಯವನ್ನು ಮೀರಿದೆ ಎಂದಿದ್ದಾರೆ.

ರಾಜ್ಯ ಸರ್ಕಾರವು ಮೃತರ ಸಂಬಂಧಿಕರಿಗೆ ತಲಾ 2 ಲಕ್ಷ ರೂ., ತೀವ್ರವಾಗಿ ಗಾಯಗೊಂಡವರಿಗೆ ರೂ. 50,000 ಮತ್ತು ಘಟನೆಯಲ್ಲಿ ಗಾಯಗೊಂಡ ಎಲ್ಲರಿಗೂ ಉಚಿತ ಚಿಕಿತ್ಸೆ ಘೋಷಿಸಿದೆ.

ವಿಭಾಗೀಯ ಆಯುಕ್ತರ ನೇತೃತ್ವದ ಮತ್ತು ಮೊರಾದಾಬಾದ್‌ನ ಡಿಐಜಿಯನ್ನು ಒಳಗೊಂಡ ತನಿಖಾ ಸಮಿತಿಗೆ ಸರ್ಕಾರವು ತನ್ನ ವರದಿಯನ್ನು ಶೀಘ್ರವಾಗಿ ಸಲ್ಲಿಸುವಂತೆ ಕೇಳಿದೆ.

ಸಂಭಾಲ್ ದೆಹಲಿಯಿಂದ 158 ಕಿಮೀ ಮತ್ತು ರಾಜ್ಯ ರಾಜಧಾನಿ ಲಖನೌನಿಂದ 350 ಕಿಮೀ ದೂರದಲ್ಲಿದೆ.

SCROLL FOR NEXT