ದೇಶ

ಮರಣದಂಡನೆ ಜಾರಿಗೆ ನೇಣು ಬದಲು ಬೇರೆ ಮಾರ್ಗದ ಬಗ್ಗೆ ಚಿಂತನೆ ನಡೆಸಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್

Manjula VN

ನವದೆಹಲಿ: ಮರಣದಂಡನೆಯನ್ನು ಜಾರಿಗೊಳಿಸುವಾಗ ನೇಣು ಹಾಕುವುದನ್ನು ಹೊರತುಪಡಿಸಿ ಹೆಚ್ಚು ಘನತೆ, ಕಡಿಮೆ ನೋವಿನ ಮತ್ತು ಸಾಮಾಜಿಕವಾಗಿ ಸ್ವೀಕಾರಾರ್ಹವಾದ ಸಾವಿನ ಮಾರ್ಗವನ್ನು ಅನ್ವೇಷಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಸೂಚನೆ ನೀಡಿದೆ.

ಗಲ್ಲಿಗೇರಿಸುವ ಸಂದರ್ಭದಲ್ಲಿ ಉಂಟಾಗುವ ಪರಿಣಾಮ ಮತ್ತು ನೋವಿನ ಬಗ್ಗೆ ಯಾವುದೇ ಅಧ್ಯಯನ ನಡೆದಿದೆಯೇ ಮತ್ತು ಪ್ರಸಕ್ತ ಲಭ್ಯ ಇರುವ ಅತ್ಯಂತ ಸೂಕ್ತ ವಿಧಾನ ಇದೇ ಆಗಿದೆಯೇ ಎಂಬ ಕುರಿತು ವಿವರಗಳನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿ ಪಿ ಎಸ್‌ ನರಸಿಂಹ ಅವರಿದ್ದ ಪೀಠ ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಅವರಿಗೆ ತಿಳಿಸಿತು.

“ಮಿ. ಅಟಾರ್ನಿ ಜನರಲ್‌ ಅವರೇ, ನೇಣು ಹಾಕುವಿಕೆಯಿಂದ ಉಂಟಾಗುವ ಸಾವಿನ ಪರಿಣಾಮ, ಅದು ಉಂಟು ಮಾಡುವ ನೋವು, ಹಾಗೂ ಅದರಿಂದ ಸಾವು ಸಂಭವಿಸಲು ತೆಗೆದುಕೊಳ್ಳುವ ಅವಧಿ ಬಗ್ಗೆ ನಮಗೆ ಮಾಹಿತಿ ನೀಡಿ. ಅತ್ಯುತ್ತಮವಾದ ವಿವರ ಬೇಕಿದೆ. ಪ್ರಸಕ್ತ ವಿಜ್ಞಾನ, ಇದೇ ಇಂದಿನ ಅತ್ಯುತ್ತಮ ವಿಧಾನ ಎನ್ನುತ್ತದೆಯೇ ಅಥವಾ ಮಾನವ ಘನತೆಯನ್ನು ಎತ್ತಿ ಹಿಡಿಯಲು ಹೆಚ್ಚು ಸೂಕ್ತವಾದ ಇನ್ನೊಂದು ವಿಧಾನ ಇದೆಯೇ” ಎಂದು ನ್ಯಾಯಾಲಯ ಕೇಳಿತು.

ಸರ್ಕಾರ ಅಂತಹ ಅಧ್ಯಯನ ಕೈಗೊಳ್ಳದಿದ್ದರೆ ಆ ಅಧ್ಯಯನ ನಡೆಸುವುದಕ್ಕಾಗಿ ದೆಹಲಿ, ಬೆಂಗಳೂರು ಅಥವಾ ಹೈದರಾಬಾದ್‌ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್‌) ಕೆಲವು ವೈದ್ಯರು, ದೇಶದೆಲ್ಲೆಡೆಯ ಗಣ್ಯರು ಹಾಗೂ ಕೆಲ ವೈಜ್ಞಾನಿಕ ತಜ್ಞರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸುವುದಾಗಿ ಸುಪ್ರೀಂಕೋರ್ಟ್‌ ತಿಳಿಸಿತು.

ನೇಣಿನ ಮೂಲಕ ಮರಣದಂಡನೆ ವಿಧಿಸುವುದು ಸೂಕ್ತ ಎಂಬ ತೀರ್ಮಾನಕ್ಕೇ ನಾವು ನಂತರ ಬಂದರೂ ಕೂಡ ಅಧ್ಯಯನದ ಸಹಾಯ ನಮಗೆ ಬೇಕಾಗಿದೆ ಎಂದು ಪೀಠ ನುಡಿಯಿತು.

ನೇಣಿನ ಮೂಲಕ ಮರಣದಂಡನೆ ವಿಧಿಸದೇ, ಚುಚ್ಚುಮದ್ದು ಅಥವಾ ವಿದ್ಯುದಾಘಾತದಂತಹ ತುಲನಾತ್ಮಕ ನೋವುರಹಿತ ವಿಧಾನ ಅಳವಡಿಸಿಕೊಳ್ಳುವಂತೆ ವಕೀಲ ರಿಷಿ ಮಲ್ಹೋತ್ರಾ ಅವರು ಸಲ್ಲಿಸಿದ್ದ ಮನವಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು.

ನೇಣಿಗೆ ಬದಲಾಗಿ ವಿದ್ಯುದಾಘಾತ, ಗುಂಡೇಟು ಅಥವಾ ಮಾರಣಾಂತಿಕ ಚುಚ್ಚುಮದ್ದಿನ ಮೂಲಕ ಮರಣ ದಂಡನೆ ವಿಧಿಸುತ್ತಿರುವ ದೇಶಗಳಲ್ಲಿ ಹೆಚ್ಚಳ ಕಂಡುಬಂದಿರುವುದಾಗಿ ಕಾನೂನು ಆಯೋಗದ 187ನೇ ವರದಿಯಲ್ಲಿ ತಿಳಿಸಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.

ಖುದ್ದು ವಾದ ಮಂಡಿಸಿದ ಮಲ್ಹೋತ್ರಾ ಅವರು ನೇಣು ಹಾಕುವ ಪ್ರಕ್ರಿಯೆಯು ಸಂಪೂರ್ಣವಾಗಿ ಕ್ರೂರ ಮತ್ತು ಅಮಾನವೀಯವಾದುದು ಎಂದರು. ನ್ಯಾ. ನರಸಿಂಹ ಅವರು ಘನತೆಯ ಸಾವು ಮತ್ತು ಸಾಧ್ಯವಾದಷ್ಟು ನೋವು ರಹಿತ ಮರಣ ದೊರೆಯಬೇಕು. ನೇಣು ಹಾಕುವುದು ಹೀಗೆಯೇ ಇರುತ್ತದೆ ಎಂದು ತೋರುತ್ತದೆ. ಚುಚ್ಚುಮದ್ದಿನ ಮೂಲಕ ತಕ್ಷಣ ಸಾವು ಸಂಭವಿಸುವುದಿಲ್ಲ ಎನ್ನುವುದಕ್ಕೆ ಉದಾಹರಣೆಗಳಿವೆ ಎಂದರು.

ಆಗ ಮಲ್ಹೋತ್ರಾ “ಯಾವುದೇ ಪ್ರಕ್ರಿಯೆ ದೋಷರಹಿತವಲ್ಲ. ನೇಣು ಹಾಕುವುದಕ್ಕೂ ಅದನ್ನು ನಾವು ಹೋಲಿಸಬೇಕು” ಎಂದರು.

"ಅಮೆರಿಕದಲ್ಲಿ ಮಾರಣಾಂತಿಕ ಚುಚ್ಚುಮದ್ದಿನಿಂದ ಉಂಟಾಗುವ ನೋವಿನ ಬಗ್ಗೆ ಬಲವಾದ ಪುರಾವೆಗಳಿವೆ. ನಾನು ಈ ವಿಚಾರವಾಗಿ ಸಾಕಷ್ಟು ಓದಿದ್ದೇನೆ," ಎಂದು ಸಿಜೆಐ ಹೇಳಿದರು.

ದೆಹಲಿಯಲ್ಲಿ ನೇಣುಗಂಬಕ್ಕೇರಿಸುವ ಕೆಲಸ ಮಾಡುವವರು (ಹ್ಯಾಂಗ್‌ಮನ್‌) ಲಭ್ಯ ಇಲ್ಲ. ಅವರನ್ನು ಕೋಲ್ಕತ್ತಾ, ಮುಂಬೈ ಇತ್ಯಾದಿ ನಗರಗಳಿಂದ ಕರೆಸಿಕೊಳ್ಳಲಾಗುತ್ತದೆ ಎಂದು ಮಲ್ಹೋತ್ರಾ ವಿವರಿಸಿದರು.

ನ್ಯಾಯಾಲಯವು ಅಂತಿಮವಾಗಿ ಪ್ರಕರಣವನ್ನು ಮೇ 2ಕ್ಕೆ ಮುಂದೂಡಿತು. ನೇಣು ಹಾಕುವ ವಿಧಾನ ಇತರೆ ವಿಧಾನಗಳ ಹೋಲಿಕೆಯಲ್ಲಿ ತೃಪ್ತಿಕರವೇ ಅಥವಾ ಮತ್ತೊಂದು ವಿಧಾನ ಅಳವಡಿಸಿಕೊಳ್ಳುವ ಮೂಲಕ ಅದನ್ನು ಅಸಾಂವಿಧಾನಿಕ ಎಂದು ಘೋಷಿಸುವುದೇ ಎಂಬುದನ್ನು ನಾವು ಪರಿಶೀಲಿಸಬೇಕಿದೆ ಎಂದು ಪೀಠ ಹೇಳಿತು.

SCROLL FOR NEXT