ದೇಶ

ಸತ್ಯವೇ ನನ್ನ ದೇವರು: ಮಾನನಷ್ಟ ಮೊಕದ್ದಮೆ ತೀರ್ಪು ಕುರಿತು ರಾಹುಲ್ ಪ್ರತಿಕ್ರಿಯೆ; ಲೋಕಸಭಾ ಸದಸ್ಯತ್ವ ಅನರ್ಹ ಸಾಧ್ಯತೆ

Srinivas Rao BV

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಅವಹೇಳನ ಮಾಡಿದ್ದ ತಮ್ಮನ್ನು ದೋಷಿ ಎಂದು ಗುಜರಾತ್​ನ ಸೂರತ್ ನ್ಯಾಯಾಲಯ ನೀಡಿರುವ ತೀರ್ಪಿನ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. 

ನನ್ನ ಧರ್ಮ ಸತ್ಯ ಹಾಗೂ ಅಹಿಂಸೆಯ ಆಧಾರಿತವಾಗಿರುವುದಾಗಿದೆ. ಸತ್ಯವೇ ನನ್ನ ದೇವರು ಹಾಗೂ ಅಹಿಂಸೆಯೇ ದೈವತ್ವ ಸಾಧಿಸುವುದಕ್ಕೆ ಇರುವ ಮಾರ್ಗ ಎಂದು ಮಹಾತ್ಮಾ ಗಾಂಧಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. 

ಕಳ್ಳರ ಹೆಸರೆಲ್ಲ ಮೋದಿ ಎಂದೇ ಇರುತ್ತದೆ ಏಕೆ ಎಂದು ಪ್ರಶ್ನಿಸಿ ಪರೋಕ್ಷವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಅವಹೇಳನ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಮೋದಿ‘ ಎಂಬ ಉಪನಾಮದ ಬಗ್ಗೆ ಅಪಮಾನಕರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ವರಿಷ್ಠರೊಬ್ಬರು ರಾಹುಲ್ ಗಾಂಧಿ ಮೇಲೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಎರಡೂ ಕಡೆಯ ವಾದಗಳನ್ನೂ ಆಲಿಸಿದ್ದ ನ್ಯಾಯಾಲಯ ರಾಹುಲ್ ಗಾಂಧಿಯವರನ್ನು ದೋಷಿ ಎಂದು ತೀರ್ಪು ನೀಡಿದ್ದು, 2 ವರ್ಷ ಜೈಲು ಶಿಕ್ಷೆ ಹಾಗೂ  15 ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ. ಜೈಲು ಶಿಕ್ಷೆ ವಿಧಿಸಿ ನಂತರ ಜಾಮೀನು ಮಂಜೂರು ಮಾಡಿದ್ದು, 30 ದಿನಗಳವರೆಗೆ ಶಿಕ್ಷೆ ಅಮಾನತುಗೊಳಿಸಿ ತೀರ್ಪು ನೀಡಿದೆ. ಈ ತೀರ್ಪಿನ ಪರಿಣಾಮದಿಂದಾಗಿ ರಾಹುಲ್ ಗಾಂಧಿ ತಮ್ಮ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳ್ಳುವ ಸಾಧ್ಯತೆ ಇದೆ. 

ಜನಪ್ರತಿನಿಧಿಗಳ ಕಾಯ್ದೆಯ ಪ್ರಕಾರ, ಯಾವುದೇ ಜನಪ್ರತಿನಿಧಿಯನ್ನು ಯಾವುದೇ ಪ್ರಕರಣದಲ್ಲಿ ದೋಷಿ ಎಂದು ಕೋರ್ಟ್ ತೀರ್ಪು ಪ್ರಕಟಿಸಿ, 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದರೆ, ಅಂತಹ ಜನಪ್ರತಿನಿಧಿಯನ್ನು ಸದನದಿಂದ ಅನರ್ಹಗೊಳಿಸಲಾಗುತ್ತದೆ ಹಾಗೂ ಚುನಾಯಿತ ಅವಧಿ ಮುಕ್ತಾಯಗೊಂಡ ಬಳಿಕ 6 ವರ್ಷಗಳ ಕಾಲ ಅನರ್ಹತೆ ಎದುರಿಸಬೇಕಾಗುತ್ತದೆ. 

SCROLL FOR NEXT