ದೇಶ

ಅದಾನಿ ಬಂಧನಕ್ಕೆ ಆಗ್ರಹಿಸಿ ಕೇಂದ್ರ ಹಣಕಾಸು ಸಚಿವರ ಕಚೇರಿ ಮುಂದೆ ಟಿಎಂಸಿ ಸಂಸದರ ಪ್ರತಿಭಟನೆ

Lingaraj Badiger

ನವದೆಹಲಿ: ಉದ್ಯಮಿ ಗೌತಮ್ ಅದಾನಿಯನ್ನು ಅವರನ್ನು ಬಂಧಿಸುವಂತೆ ಒತ್ತಾಯಿಸಿ ಟಿಎಂಸಿ ಸಂಸದರ ನಿಯೋಗ ಗುರುವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

ಟಿಎಂಸಿ ಲೋಕಸಭಾ ಸಂಸದರಾದ ಪ್ರತಿಮಾ ಮಂಡಲ್, ಅಬು ತಾಹೆರ್ ಖಾನ್, ಖಲೀಲುರ್ ರೆಹಮಾನ್, ಸುನಿಲ್ ಮಂಡಲ್ ಮತ್ತು ರಾಜ್ಯಸಭಾ ಸದಸ್ಯರಾದ ಸಂತಾನು ಸೇನ್, ಅಬೀರ್ ಬಿಸ್ವಾಸ್, ಮೌಸಮ್ ನೂರ್ ಹಾಗೂ ಸುಸ್ಮಿತಾ ದೇವ್ ಅವರು ಪ್ರತಿಭಟನೆಯಲ್ಲಿ ಭಾಗವಾಗಿದ್ದರು.

ಸಾಂಕೇತಿಕ ಪ್ರತಿಭಟನೆಯ ಭಾಗವಾಗಿ ಅದಾನಿ ಮತ್ತು ಪ್ರಧಾನಿ ಮೋದಿ ಅವರ ಚಿತ್ರಗಳನ್ನು ಮುದ್ರಿಸಿದ ಎರಡು ಕ್ಯಾಪ್ಗಳನ್ನು ಸಹ ಸೀತಾರಾಮನ್ ಅವರ ಕಚೇರಿಗೆ ನೀಡಿದ್ದಾರೆ.

ತೃಣಮೂಲ ಕಾಂಗ್ರೆಸ್ ಸಂಸದರ ಇನ್ನೊಂದು ಗುಂಪು ಕೂಡ ಇದೇ ಬೇಡಿಕೆಯೊಂದಿಗೆ ಜಾರಿ ನಿರ್ದೇಶನಾಲಯಕ್ಕೆ ಪಾದಯಾತ್ರೆ ನಡೆಸಿತು.

"ನಾವು ಭ್ರಷ್ಟಾಚಾರದ ಭೀತಿಗೆ ಬಲಿಯಾಗುವುದಿಲ್ಲ! ನ್ಯಾಯ ಮತ್ತು ಉತ್ತರದಾಯಿತ್ವಕ್ಕಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ!" ಎಂದು ಟಿಎಂಸಿ ಟ್ವೀಟ್ ಮಾಡಿದೆ.

ಸಾಮಾನ್ಯ ಜನರಿಗೆ ಸೇರಿದ ಸುಮಾರು 1.20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಅಕ್ರಮಗಳಿಗೆ ಅದಾನಿ ಗ್ರೂಪ್ ಕಾರಣ ಎಂದು ಆರೋಪಿಸಿರು ತೃಣಮೂಲ ಕಾಂಗ್ರೆಸ್ ಕಳೆದ ವಾರದಿಂದ ಗೌತಮ್ ಅದಾನಿ ಅವರನ್ನು ಬಂಧಿಸುವಂತೆ ಒತ್ತಾಯಿಸುತ್ತಿದೆ.

SCROLL FOR NEXT