ದೇಶ

ಲಂಚ ಪ್ರಕರಣ: ಸಿಬಿಐ ಬಂಧಿಸಿದ ನಂತರ 4ನೇ ಮಹಡಿಯಿಂದ ಜಿಗಿದು ಗುಜರಾತ್ ಅಧಿಕಾರಿ ಸಾವು

Lingaraj Badiger

ಅಹಮದಾಬಾದ್: ಲಂಚ ಪ್ರಕರಣದಲ್ಲಿ ವಿದೇಶಿ ವ್ಯಾಪಾರ ನಿರ್ದೇಶನಾಲಯದ(ಡಿಜಿಎಫ್‌ಟಿ) ಹಿರಿಯ ಅಧಿಕಾರಿ ಜವ್ರಿ ಮಾಲ್ ಬಿಷ್ಣೋಯ್(44) ಅವರನ್ನು ಶನಿವಾರ ಸಿಬಿಐ ಬಂಧಿಸಿದ ನಂತರ ಆರೋಪಿ ಅಧಿಕಾರಿ ನಾಲ್ಕನೇ ಮಹಡಿಯಲ್ಲಿರುವ ತಮ್ಮ ಕಚೇರಿಯಿಂದ ಜಿಗಿದು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.

ತೀವ್ರವಾಗಿ ಗಾಯಗೊಂಡಿದ್ದ ಬಿಷ್ಣೋಯ್ ಅವರನ್ನು ತಕ್ಷಣ ರಾಜ್‌ಕೋಟ್‌ ಸಿವಿಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

“ಡಿಜಿಎಫ್‌ಟಿಯ ಜಂಟಿ ನಿರ್ದೇಶಕ ಬಿಷ್ಣೋಯ್ ಅವರನ್ನು ಶುಕ್ರವಾರ ಸಿಬಿಐ 5 ಲಕ್ಷ ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಬಂಧಿಸಿತ್ತು. ಸಿಬಿಐ ರಾತ್ರಿಯಿಡೀ ಅವರ ಕಚೇರಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತು ಮತ್ತು ಬೆಳಗ್ಗೆ 9.45ರ ಸುಮಾರಿಗೆ ಕಾರ್ಯಾಚರಣೆ ಮುಗಿಸಲು ಸಿದ್ಧವಾಗಿದ್ದಾಗ ಆರೋಪಿಯು ಇದ್ದಕ್ಕಿದ್ದಂತೆ ಕಿಟಕಿಯ ಕಡೆಗೆ ಹೋಗಿ ಮೇಲಿಂದ ಕೆಳಕ್ಕೆ ಜಿಗಿದಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ(ಡಿಸಿಪಿ) ಸುಧೀರ್ ದೇಸಾಯಿ ಅವರು ಹೇಳಿದ್ದಾರೆ.

ಈ ಸಂಬಂಧ ರಾಜ್‌ಕೋಟ್‌ನ ಪ್ರದ್ಯುಮನ್ ನಗರ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ದೇಸಾಯಿ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳ ಪಾತ್ರದ ಕುರಿತು ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಇನ್ನು ಘಟನೆ ನಂತರ ಸಿವಿಲ್ ಆಸ್ಪತ್ರೆ ಮುಂದೆ ಜಮಾಯಿಸಿದ ಜನ ಬಿಷ್ಣೋಯಿ ಸಾವಿಗೆ ಸಿಬಿಐ ಕಾರಣ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.

SCROLL FOR NEXT