ದೇಶ

ಉದ್ಯೋಗಕ್ಕಾಗಿ ಭೂಮಿ ಹಗರಣ: 8 ಗಂಟೆಗಳ ಕಾಲ ಸಿಬಿಐನಿಂದ ತೇಜಸ್ವಿ ಯಾದವ್ ವಿಚಾರಣೆ

Nagaraja AB

ನವದೆಹಲಿ: ಉದ್ಯೋಗಕ್ಕಾಗಿ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯಲ್ಲಿ ಸಿಬಿಐ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ಶನಿವಾರ ತನ್ನ ಪ್ರಧಾನ ಕಚೇರಿಯಲ್ಲಿ ಎಂಟು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ನೀಡಿದ್ದ ಮೂರು ದಿನಾಂಕಗಳಂದು ವಿಚಾರಣೆಗೆ ಹಾಜರಾಗದ ತೇಜಸ್ವಿ ಯಾದವ್,  ಕಳೆದ ವಾರ ದೆಹಲಿ ಹೈಕೋರ್ಟ್‌ಗೆ ನೀಡಿದ ಬದ್ಧತೆಯ ಪ್ರಕಾರ ಬೆಳಿಗ್ಗೆ 10:30 ರ ಸುಮಾರಿಗೆ ಸಿಬಿಐ ಪ್ರಧಾನ ಕಚೇರಿಗೆ ಬಂದ  ತೇಜಸ್ವಿ ಯಾದವ್ ಅವರನ್ನು 90 ನಿಮಿಷಗಳ ಊಟದ ವಿರಾಮದೊಂದಿಗೆ ರಾತ್ರಿ 8 ಗಂಟೆಯವರೆಗೂ ವಿಚಾರಣೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.

ಎಬಿ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಎಕೆ ಇನ್ಫೋಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್‌ ಸೇರಿದಂತೆ ಯಾದವ್ ಅವರ ಹಣಕಾಸಿನ ವಹಿವಾಟಿನ ಮೇಲೆ ಸಿಬಿಐ ವಿಚಾರಣೆ ನಡೆಸುತ್ತಿದೆ.  ಯಾದವ್ ಅವರನ್ನು ಈ ತಿಂಗಳು ಬಂಧಿಸುವುದಿಲ್ಲ ಎಂದು ಕಳೆದ ವಾರ ಸಿಬಿಐ ದೆಹಲಿ ಹೈಕೋರ್ಟ್‌ಗೆ ಭರವಸೆ ನೀಡಿತ್ತು.

ವಿಶೇಷ ಸಿಬಿಐ ನ್ಯಾಯಾಲಯವು ಇದೇ ಪ್ರಕರಣದಲ್ಲಿ ಯಾದವ್ ಅವರ ತಂದೆ ಲಾಲು ಪ್ರಸಾದ್, ತಾಯಿ ರಾಬ್ರಿ ದೇವಿ, ಸಹೋದರಿ ಮಿಶಾ ಭಾರತಿ ಮತ್ತಿತರರಿಗೆ ಮಾರ್ಚ್ 15 ರಂದು ಈಗಾಗಲೇ ಜಾಮೀನು ನೀಡಿದೆ. 

SCROLL FOR NEXT