ದೇಶ

ತಮ್ಮ ಟ್ವಿಟರ್ ಬಯೋವನ್ನು ಬದಲಾಯಿಸಿದ ರಾಹುಲ್ ಗಾಂಧಿ; ಅನರ್ಹ ಸಂಸದ ಎಂದು ಬರೆದ ಕಾಂಗ್ರೆಸ್ ನಾಯಕ 

Ramyashree GN

ನವದೆಹಲಿ: ಲೋಕಸಭೆಯಿಂದ ಅನರ್ಹಗೊಂಡ ಎರಡು ದಿನಗಳ ನಂತರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ತಮ್ಮ ಟ್ವಿಟರ್ ಬಯೋವನ್ನು ಬದಲಾಯಿಸಿದ್ದಾರೆ. ಬಯೋದಲ್ಲಿ 'ಅನರ್ಹ ಸಂಸದ' ಎಂದು ಬರೆದುಕೊಂಡಿದ್ದಾರೆ.

ಅವರ ಟ್ವಿಟರ್ ಬಯೋದಲ್ಲಿ ಈಗ, 'ಇದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯ ಮತ್ತು ಅನರ್ಹ ಸಂಸದ ರಾಹುಲ್ ಗಾಂಧಿಯವರ ಅಧಿಕೃತ ಖಾತೆಯಾಗಿದೆ' ಎಂದಿದೆ.

'ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಅದಾನಿ ಗ್ರೂಪ್ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಕೇಳಲು ಹೆದರುವುದಿಲ್ಲ' ಎಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.

'ನನ್ನ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ನಾಲ್ವರು ಸಚಿವರು ಮಾಡಿರುವ ಸುಳ್ಳು ಆರೋಪದ ವಿರುದ್ಧ ಸ್ಪೀಕರ್ ಜೊತೆ ಮಾತನಾಡಿದ್ದೇನೆ. ಆದರೆ, ಮಾತನಾಡಲು ಅವಕಾಶ ನೀಡಲಿಲ್ಲ. ‘ಪ್ರಧಾನಿ ನರೇಂದ್ರ ಮೋದಿ ಮತ್ತು ಗೌತಮ್ ಅದಾನಿ ನಡುವಿನ ಸಂಬಂಧ ಹೊಸದಲ್ಲ’ ಎಂದೂ ಅವರು ಆರೋಪಿಸಿದ್ದಾರೆ.

'ಶೆಲ್ ಕಂಪನಿಗಳಿಂದ ಹೊರಬಂದ 20,000 ಕೋಟಿ ರೂ. ಯಾರ ಹಣ ಎಂದು ನಾನು ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸುವುದಿಲ್ಲ. ರಾಷ್ಟ್ರದ ಧ್ವನಿಯನ್ನು ರಕ್ಷಿಸಲು ನಾನು ಇಲ್ಲಿದ್ದೇನೆ. ನಾನು ಜೈಲು ಶಿಕ್ಷೆ, ಅನರ್ಹತೆ ಮತ್ತು ಇತರರಿಗೆ ಹೆದರುವುದಿಲ್ಲ. ನಾನು ಅಂತಹ ವ್ಯಕ್ತಿ ಅಲ್ಲ ಮತ್ತು ಅವರು ನನ್ನನ್ನು ಅರ್ಥಮಾಡಿಕೊಂಡಿಲ್ಲ. ನಾನು ಹಿಂದೆ ಸರಿಯುವ ಮಾತೇ ಇಲ್ಲ ಮತ್ತು ತತ್ವದ ಮೇಲೆ ನಡೆದುಕೊಳ್ಳುತ್ತೇನೆ' ಎಂದಿದ್ದಾರೆ.

2019ರ 'ಮೋದಿ ಉಪನಾಮ' ಕುರಿತಾದ ಮಾನನಷ್ಟ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಒಂದು ದಿನದ ನಂತರ ರಾಹುಲ್ ಗಾಂಧಿ ಅವರನ್ನು ಲೋಕಸಭೆಯ ಸದಸ್ಯರಾಗಿ ಶುಕ್ರವಾರ ಅನರ್ಹಗೊಳಿಸಲಾಯಿತು.

ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರ ದೂರಿನ ಮೇರೆಗೆ ಸೂರತ್ ನ್ಯಾಯಾಲಯವು ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಗುರುವಾರ ವಿಧಿಸಿದೆ.

SCROLL FOR NEXT