ದೇಶ

ಗಾಯಗೊಂಡು ಬಳಲುತ್ತಿದ್ದ ಕೊಕ್ಕರೆಯನ್ನು ರಕ್ಷಿಸಿ, ಆರೈಕೆ ಮಾಡಿದ ವ್ಯಕ್ತಿಗೆ ಅರಣ್ಯ ಇಲಾಖೆ ನೋಟಿಸ್

Ramyashree GN

ಅಮೇಥಿ: ಕೊಕ್ಕರೆ (ಸರಸ್ ಕ್ರೇನ್) ಅನ್ನು ರಕ್ಷಿಸಿ ಒಂದು ವರ್ಷ ಆರೈಕೆ ಮಾಡಿದ ಉತ್ತರ ಪ್ರದೇಶದ ವ್ಯಕ್ತಿಗೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿ, ನೋಟಿಸ್ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೇಥಿ ಜಿಲ್ಲೆಯ ಮಂಡ್ಖಾ ಗ್ರಾಮದಲ್ಲಿ ಆರಿಫ್ ಖಾನ್ ಗುರ್ಜರ್ ಅವರೊಂದಿಗೆ ಕೊಕ್ಕರೆ ವಾಸಿಸುತ್ತಿತ್ತು.  'ಕುಟುಂಬದ ಸದಸ್ಯರಂತೆ' ಸ್ವೀಕರಿಸಿದ್ದ ಕ್ರೇನ್ ಅನ್ನು ಮಾರ್ಚ್ 21ರಂದು ಅರಣ್ಯ ಇಲಾಖೆ ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದರು.

ಈ ಪಕ್ಷಿಯನ್ನು ರಾಯ್ ಬರೇಲಿಯ ಸಮಸ್ಪುರ್ ಅಭಯಾರಣ್ಯಕ್ಕೆ ಸ್ಥಳಾಂತರಿಸಲಾಗಿದ್ದು, ಅದರ ನೈಸರ್ಗಿಕ ಪರಿಸರದಲ್ಲಿ ವಾಸಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶನಿವಾರ, ಇಲಾಖೆಯು ಗುರ್ಜರ್‌ಗೆ ನೋಟಿಸ್ ಜಾರಿ ಮಾಡಿತು ಮತ್ತು ಅವರ ಹೇಳಿಕೆಯನ್ನು ದಾಖಲಿಸಲು ಏಪ್ರಿಲ್ 4 ರಂದು ಗೌರಿಗಂಜ್ ವಿಭಾಗೀಯ ಅರಣ್ಯಾಧಿಕಾರಿಗಳ ಕಚೇರಿಗೆ ಹಾಜರಾಗುವಂತೆ ತಿಳಿಸಿದೆ.

ಸಹಾಯಕ ವಿಭಾಗೀಯ ಅರಣ್ಯಾಧಿಕಾರಿ (ಗೌರಿಗಂಜ್) ರಣವೀರ್ ಸಿಂಗ್ ಅವರು ನೀಡಿರುವ ನೋಟಿಸ್ ಪ್ರಕಾರ, ಗುರ್ಜರ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹಕ್ಕಿಯನ್ನು ಕೊಂಡೊಯ್ದ ಒಂದು ದಿನದ ನಂತರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪತ್ರಿಕಾಗೋಷ್ಠಿಯಲ್ಲಿ ಅರಣ್ಯ ಇಲಾಖೆಯ ಕ್ರಮವನ್ನು ಖಂಡಿಸಿದರು ಮತ್ತು ಪ್ರಧಾನಿ ನಿವಾಸದಲ್ಲಿರುವ ನವಿಲುಗಳನ್ನು ತೆಗೆದುಕೊಂಡು ಹೋಗಲು ಯಾವುದೇ ಅಧಿಕಾರಿಗೆ ಧೈರ್ಯವಿದೆಯೇ ಎಂದು ಪರೋಕ್ಷವಾಗಿ ಪ್ರಶ್ನಿಸಿದರು.

ಯಾದವ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ವಿಭಾಗೀಯ ಅರಣ್ಯಾಧಿಕಾರಿ ಡಿಎನ್ ಸಿಂಗ್, 'ನಾವೀಗ ಯಾವುದೇ ಕ್ರಮ ಕೈಗೊಂಡಿದ್ದರೂ, ಅದು ಆರಿಫ್ (ಗುರ್ಜರ್) ಒಪ್ಪಿಗೆಯೊಂದಿಗೆ ತೆಗೆದುಕೊಂಡಿದ್ದೇವೆ' ಎಂದಿದ್ದಾರೆ.

SCROLL FOR NEXT