ದೇಶ

ಪ್ರತಿಪಕ್ಷಗಳ ವಿರುದ್ಧ ಪ್ರಬಲ ಹೋರಾಟಕ್ಕೆ ಸಿದ್ಧವಾಗುವಂತೆ ಬಿಜೆಪಿಗೆ ಪ್ರಧಾನಿ ಮೋದಿ ಸೂಚನೆ

Lingaraj Badiger

ನವದೆಹಲಿ: ಬಿಜೆಪಿ ಬೆಳೆದು ಯಶಸ್ವಿಯಾದಷ್ಟು ಪ್ರತಿಪಕ್ಷಗಳ ದಾಳಿ ಹೆಚ್ಚಾಗುತ್ತಿದೆ. ಹೀಗಾಗಿ "ಪ್ರಬಲ ಹೋರಾಟ"ಕ್ಕೆ ಸಿದ್ಧರಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ.

ದೆಹಲಿಯ ಸಂಸತ್ ಸಂಕೀರ್ಣದಲ್ಲಿ ಇಂದು ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, "ಬಿಜೆಪಿ ಹೆಚ್ಚು ಹೆಚ್ಚು ಚುನಾವಣೆಗಳನ್ನು ಗೆದ್ದಷ್ಟು, ಪ್ರತಿಪಕ್ಷಗಳು ಹೆಚ್ಚು ಹೆಚ್ಟು ಪ್ರತಿಭಟನೆ ನಡೆಸುತ್ತಿವೆ. ಒಂದು ಕಡೆ ಪಕ್ಷದ ಗೆಲುವು ಮುಂದುವರಿದರೆ, ಇನ್ನೊಂದು ಕಡೆ ಪ್ರತಿಪಕ್ಷಗಳ ದಾಳಿ ಸಹ ಹೆಚ್ಚಾಗುತ್ತಿವೆ. ಹೀಗಾಗಿ ಪ್ರಬಲ ಹೋರಾಟಕ್ಕೆ ಸಿದ್ಧರಾಗಬೇಕು" ಎಂದು ಹೇಳಿದ್ದಾರೆ.

ಸಂಸತ್ ಬಜೆಟ್ ಅಧಿವೇಶನದ ಎರಡನೇ ಭಾಗದಲ್ಲಿ ಬಿಜೆಪಿ ಸಂಸದೀಯ ಸಭೆ ನಡೆದಿರುವುದು ಇದೇ ಮೊದಲು. ಇತ್ತೀಚೆಗೆ ಮುಕ್ತಾಯಗೊಂಡ ಈಶಾನ್ಯ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲೂ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರನ್ನು ಬಿಜೆಪಿ ಸಂಸದರು ಅಭಿನಂದಿಸುವುದರೊಂದಿಗೆ ಸಭೆ ಪ್ರಾರಂಭವಾಯಿತು.

ಸಮ್ಮಿಶ್ರ ಸರ್ಕಾರ ಹೊಂದಿರುವ ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಪಕ್ಷದ ಗೆಲುವಿಗಾಗಿ ಪ್ರಧಾನಿ ಮೋದಿಯವರನ್ನು ಪಕ್ಷದ ನಾಯಕರು ಅಭಿನಂದಿಸಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿರುವುದನ್ನು ವಿರೋಧ ಪಕ್ಷಗಳು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಕರೆಯುವುದನ್ನು ಮುಂದುವರಿಸಿದರೆ, ಬಿಜೆಪಿ ಮತ್ತು ಎನ್‌ಡಿಎ ಸಂಸದರು ವೀರ್ ಸಾವರ್ಕರ್ ಮತ್ತು ಒಬಿಸಿ ಸಮುದಾಯವನ್ನು ಅವಮಾನಿಸಿರುವ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.

SCROLL FOR NEXT