ದೇಶ

ಕೋವಿಡ್ ಉಲ್ಬಣ: ಆತಂಕಪಡುವ ಅಗತ್ಯವಿಲ್ಲ- ದೆಹಲಿ ಆರೋಗ್ಯ ಸಚಿವಾಲಯ

Nagaraja AB

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಪರಿಸ್ಥಿತಿ ಪರಿಶೀಲಿಸಲು ಗುರುವಾರ ತಜ್ಞರೊಂದಿಗೆ ಸಭೆ ನಡೆಸಿದ ದೆಹಲಿ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್, ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಕಳೆದ ವರ್ಷ ಆಗಸ್ಟ್ 31 ರಿಂದ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳು ಸಂಖ್ಯೆ 300 ಕ್ಕೆ ಏರಿದ ಒಂದು ದಿನದ ನಂತರ ಈ ಸಭೆ ನಡೆದಿದೆ. ಆರೋಗ್ಯ ಇಲಾಖೆ ಹಂಚಿಕೊಂಡ ಮಾಹಿತಿಯ ಪ್ರಕಾರ ಪಾಸಿಟಿವಿಟಿ ದರ ಶೇಕಡಾ 13.89 ಕ್ಕೆ ಏರಿದೆ. ಎರಡು ಕೋವಿಡ್-ಸಂಬಂಧಿತ ಸಾವುಗಳು ಸಹ ವರದಿಯಾಗಿದೆ ಎಂದು ಅದು ಹೇಳಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರದ್ವಾಜ್, ಕೋವಿಡ್ -19 ಪ್ರಕರಣಗಳ ಏರಿಕೆಯ ಬಗ್ಗೆ ಕೆಲವೊಂದು ಸೂಚನೆಗಳು ಸಿಕ್ಕಿವೆ. ಆದರೆ, ಪರಿಸ್ಥಿತಿ ನಿಯಂತ್ರಣಕ್ಕೆ ಸರ್ಕಾರ ಸಂಪೂರ್ಣವಾಗಿ ಸಿದ್ಧವಿದೆ ಎಂದರು. 

ಕೋವಿಡ್ ಪರಿಸ್ಥಿತಿ ಕುರಿತು ಚರ್ಚಿಸಲು ಕಳೆದ ರಾತ್ರಿ ನನ್ನನ್ನು ಕರೆದಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಗುರುವಾರ ತುರ್ತು ಸಭೆ ಕರೆಯುವಂತೆ ಸೂಚಿಸಿದ್ದರು. ಇಂದಿನ ಸಭೆಯಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು, ಜಿನೋಮ್ ಸೀಕ್ವೆನ್ಸಿಂಗ್ ತಜ್ಞರು, ವಿಶೇಷ ಕಾರ್ಯದರ್ಶಿ ಉಪಸ್ಥಿತರಿದ್ದರು. ಪರಿಸ್ಥಿತಿಯನ್ನು ಹತ್ತಿರದಿಂದ ವಿಶ್ಲೇಷಿಸಲಾಗಿದೆ. ಪಾಸಿಟಿವಿಟಿ ಪ್ರಮಾಣ ಹೆಚ್ಚಿರುವುದರಿಂದ ಗಾಬರಿಯಾಗುವ ಅಗತ್ಯವಿಲ್ಲ ಎಂದರು. 

ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಮತ್ತು ರೋಗಿಗಳಲ್ಲಿನ ರೋಗಲಕ್ಷಣಗಳ ಬಗ್ಗೆ ಭಾರದ್ವಾಜ್ ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. XBB ರೂಪಾಂತರ ಮತ್ತು ಅದರ ಉಪ ರೂಪಾಂತರಗಳಿಂದ ಕೋವಿಡ್-19 ಪ್ರಕರಣಗಳು ಹೆಚ್ಚಾಗಿವೆ ಎಂಬುದು ಮಾದರಿಗಳ ಜೀನೋಮ್ ಸೀಕ್ವೆನ್ಸಿಂಗ್ ನಿಂದ ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ. 

ಕಳೆದ ವರ್ಷ ಆಗಸ್ಟ್ 31 ರಂದು ದೆಹಲಿಯಲ್ಲಿ 377 ಪ್ರಕರಣಗಳು ಮತ್ತು ಎರಡು ಸಾವು ಪ್ರಕರಣ ವರದಿಯಾಗಿತ್ತು. ಪಾಸಿಟಿವಿಟಿ ದರ ಶೇ. 2.58 ರಷ್ಟಿತ್ತು.

SCROLL FOR NEXT