ದೇಶ

ದೇಗುಲದ ಬಾವಿಯ ಛಾವಣಿ ಕುಸಿತ ಪ್ರಕರಣ: ಮೃತರ ಸಂಖ್ಯೆ 36ಕ್ಕೆ ಏರಿಕೆ, ಸ್ಥಳಕ್ಕೆ ಸಿಎಂ ಚೌಹಾಣ್ ಭೇಟಿ, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಭರವಸೆ!

Manjula VN

ಇಂದೋರ್: ಇಂದೋರ್'ನ ದೇವಸ್ಥಾನವೊಂದರ ಮೆಟ್ಟಿಲು ಬಾವಿ ಕುಸಿತಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಸಂಖ್ಯೆ 36ಕ್ಕೆ ಏರಿಕೆಯಾಗಿದ್ದು, ಘಟನಾ ಸ್ಥಳಕ್ಕೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಭೇಟಿ ನೀಡಿ, ಶುಕ್ರವಾರ ಪರಿಶೀಲನೆ ನಡಸಿದ್ದಾರೆ.

ಸ್ಥಳಕ್ಕೆ ತೆರಳಿದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ರಕ್ಷಣಾ ಕಾರ್ಯಾಚರಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದರು.

ಪ್ರಕರಣ ಸಂಬಂಧ ಈಗಾಗಲೇ ಎಫ್ಐಆರ್ ದಾಖಲಾಗಿದೆ. ಮ್ಯಾಜಿಸ್ಟ್ರೇಟ್ ತನಿಖೆಗೂ ಆದೇಶಿಸಲಾಗಿದೆ. ದುರ್ಘಟನೆಗೆ ಕಾರಣರಾದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಪ್ರಸ್ತುತ ರಕ್ಷಣಾ ಕಾರ್ಯಾಚರಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಧಾನಮಂತ್ರಿಗಳು ಕೂಡ ಈಗಾಗಲೇ ಪರಿಹಾರಗಳನ್ನು ಘೋಷಣೆ ಮಾಡಿದ್ದಾರೆ. ರಾಜ್ಯಾದ್ಯಂತ ಇಂತಹ ಸ್ಟೆಪ್‌ವೆಲ್‌ಗಳು ಮತ್ತು ಬೋರ್‌ವೆಲ್‌ಗಳ ಪರಿಶೀಲನೆಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದರು.

ರಾಮನವಮಿ ನಿಮಿತ್ತ ಇಂದೋರ್'ನ ಬೇಲೇಶ್ವರ ದೇವಸ್ಥಾನದಲ್ಲಿ ಹೋಮ ಹವನ ಏರ್ಪಡಿಸಲಾಗಿತ್ತು. ಇದರಲ್ಲಿ ಪಾಲ್ಗೊಳ್ಳಲು ಭಾರೀ ಸಂಖ್ಯೆಯಲ್ಲಿ ಜನ ಬಂದು ನೂಕು ನುಗ್ಗಲು ಏರ್ಪಟ್ಟಿತ್ತು. ಈ ವೇಳೆ ದೇಗುಲದ ಬಾವಿ ಬಳಿಯ ಭೂಮಿ ಕುಸಿದಿದ್ದು, ಇದರ ಪರಿಣಾಮ ಅಲ್ಲೇ ಇದ್ದ ಬಾವಿಯ ಕಬ್ಬಿಣದ ಸರಳಿನ ಮೇಲ್ಛಾವಣಿಯೂ ಕುಸಿದು ಬಿದ್ದಿತ್ತು. ಈ ವೇಳೆ ಸ್ಥಳದಲ್ಲಿದ್ದ ಹಲವು ಮಂದಿ ಭಕ್ತರು ಬಾವಿಗೆ ಬಿದ್ದಿದ್ದರು. ದುರ್ಘಟನೆಯಲ್ಲಿ ಈ ವರೆಗೂ 35 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

SCROLL FOR NEXT