ದೇಶ

ಸ್ಥಿರ ಸರ್ಕಾರದ ಬಗ್ಗೆ ಮೋದಿ ಮಾತು; ಕರ್ನಾಟಕದಲ್ಲಿನ ಬಿಜೆಪಿ ಸರ್ಕಾರ ಕುದುರೆ ವ್ಯಾಪಾರದಿಂದ ರಚನೆಯಾಗಿದ್ದು; ಚಿದಂಬರಂ

Ramyashree GN

ನವದೆಹಲಿ: 2018ರ ಚುನಾವಣೆಯ ನಂತರ ರಾಜ್ಯದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರವು 'ಮೋಸ, ಕುದುರೆ ವ್ಯಾಪಾರ ಮತ್ತು ಹಣದ ಬಲ'ದಿಂದ ಹುಟ್ಟಿಕೊಂಡಿದೆ ಎಂದು ಆರೋಪಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ, ಕರ್ನಾಟಕ ಚುನಾವಣಾ ಪ್ರಚಾರದಲ್ಲಿ ಸ್ಥಿರ ಸರ್ಕಾರದ ಕುರಿತು ಹೇಳಿಕೆ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ್ದಾರೆ. 
ಕರ್ನಾಟಕದಲ್ಲಿ ತಮ್ಮ ಪ್ರಚಾರ ಭಾಷಣಗಳಲ್ಲಿ, ಪ್ರಧಾನಿ ಮೋದಿ ಅವರು ತ್ವರಿತಗತಿಯ ಸರ್ವತೋಮುಖ ಅಭಿವೃದ್ಧಿಗೆ, ಪೂರ್ಣ ಬಹುಮತದೊಂದಿಗೆ ಪ್ರಬಲ ಮತ್ತು ಸ್ಥಿರವಾದ ಬಿಜೆಪಿ ಸರ್ಕಾರ ಮುಖ್ಯ ಎಂದು ಪ್ರತಿಪಾದಿಸುತ್ತಿದ್ದಾರೆ.

ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಚಿದಂಬರಂ, 'ಕರ್ನಾಟಕದಲ್ಲಿ ಸ್ಥಿರ ಸರ್ಕಾರಗಳನ್ನು ನೀಡಲು ಬಿಜೆಪಿಗೆ ಮತ ನೀಡುವಂತೆ ಗೌರವಾನ್ವಿತ ಪ್ರಧಾನಿ ಮನವಿ ಮಾಡಿದ್ದಾರೆ. ಆದರೆ, ಕರ್ನಾಟಕ ರಾಜ್ಯ ವಿಧಾನಸಭೆಗೆ 2018ರ ಸಾರ್ವತ್ರಿಕ ಚುನಾವಣೆಯ ನಂತರ, ರಾಜ್ಯವು ನಾಲ್ಕು ಸರ್ಕಾರಗಳಿಗೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.

'ಬಿಜೆಪಿ ನೇತೃತ್ವದ ಸರ್ಕಾರ ಜನರಿಂದ ಅಧಿಕಾರಕ್ಕೆ ಬರಲಿಲ್ಲ. ಅವರು ಮೋಸ, ಕುದುರೆ ವ್ಯಾಪಾರ ಮತ್ತು ಹಣದ ಬಲದಿಂದ ಸರ್ಕಾರವನ್ನು ರಚಿಸಿದ್ದಾರೆ' ಎಂದು ಮಾಜಿ ಕೇಂದ್ರ ಸಚಿವರು ಆರೋಪಿಸಿದರು.

ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿಯಿಂದ 'ಹಳಿತಪ್ಪಿದ' ಕರ್ನಾಟಕದ ಎಂಜಿನ್ ಅನ್ನು ಮುನ್ನಡೆಸಲು ಮೇ 10ರ ಚುನಾವಣೆ ದಾರಿಮಾಡಿಕೊಡಲಿದೆ ಎಂದು ಹೇಳುವ ಮೂಲಕ ಕರ್ನಾಟಕ ಚುನಾವಣೆಯಲ್ಲಿ ಅದರ 'ಡಬಲ್ ಎಂಜಿನ್' ಪಿಚ್‌ನ ಬಗ್ಗೆ ಬಿಜೆಪಿಯನ್ನು ಕಾಂಗ್ರೆಸ್ ಟೀಕಿಸಿದೆ.

ರಾಜ್ಯದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಹೊರಬೀಳಲಿದೆ.

SCROLL FOR NEXT