ದೇಶ

40 ಪರ್ಸೆಂಟ್ ಕಮಿಷನ್‌ನಲ್ಲಿ ಯಾವ ಇಂಜಿನ್ ಎಷ್ಟು ಪಡೆದುಕೊಂಡಿದೆ; ಕರ್ನಾಟಕದ ಜನರಿಗೆ ತಿಳಿಸಿ: ಮೋದಿಗೆ ರಾಹುಲ್ ಆಗ್ರಹ

Vishwanath S

ಬೆಂಗಳೂರು: ಕರ್ನಾಟಕದಲ್ಲಿ ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಮೌನವನ್ನು ಪ್ರಶ್ನಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಡಬಲ್ ಇಂಜಿನ್ ಸರ್ಕಾರದ' ಪ್ರತಿ ಇಂಜಿನ್‌ಗೆ ರಾಜ್ಯದ 'ಶೇ 40ರಷ್ಟು ಕಮಿಷನ್' ನಿಂದ ಎಷ್ಟು ಸಿಕ್ಕಿದೆ ಎಂದು ಹೇಳಿ ಎಂದು ಕೇಳಿದ್ದಾರೆ. 

ಇದೇ ವೇಳೆ ಸಂಸತ್ತಿನಲ್ಲಿ ಅದಾನಿ ವಿಷಯವನ್ನು ಪ್ರಸ್ತಾಪಿಸಿದ್ದಕ್ಕಾಗಿ ನನ್ನನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆನೇಕಲ್‌ನಲ್ಲಿ ಕಾಂಗ್ರೆಸ್ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕಳೆದ ಮೂರು ವರ್ಷಗಳಿಂದ ಕರ್ನಾಟಕದಲ್ಲಿ ಬಿಜೆಪಿ ಸರಕಾರವಿದ್ದು, ಪ್ರಧಾನಿಗೆ ಇಲ್ಲಿನ ಭ್ರಷ್ಟಾಚಾರದ ಬಗ್ಗೆ ಅರಿವಿದೆ. ನೀವು ಅದನ್ನು ಕೇವಲ 'ಡಬಲ್ ಇಂಜಿನ್ ಸರ್ಕಾರ' ಎನ್ನುತ್ತಿದ್ದೀರಿ. ಈ ಬಾರಿ ಡಬಲ್ ಇಂಜಿನ್ ಕಳ್ಳತನವಾಗಿದೆ ಎಂದು ಹೇಳಿದರು.

40 ಪರ್ಸೆಂಟ್ ಕಮಿಷನ್‌ನಲ್ಲಿ ಯಾವ ಇಂಜಿನ್ ಗೆ ಎಷ್ಟು ಸಿಕ್ಕಿತು ಎಂಬುದನ್ನು ದಯವಿಟ್ಟು ಕರ್ನಾಟಕದ ಜನತೆಗೆ ತಿಳಿಸಿ. 40 ರಷ್ಟು ಕಮಿಷನ್ ವಸೂಲಿ ಮಾಡಲಾಗಿದೆ ಎಂದು ಕರ್ನಾಟಕದಲ್ಲಿ ಗುತ್ತಿಗೆದಾರರ ಸಂಘವು ಪ್ರಧಾನಿಗೆ ಪತ್ರ ಬರೆದಿದ್ದರೂ ಮೋದಿ ಉತ್ತರಿಸಲಿಲ್ಲ ಎಂದು ರಾಹುಲ್ ಹೇಳಿದರು.

ಹಗರಣಗಳ ಮೇಲೆ ಹಗರಣಗಳು ನಡೆದಿವೆ ಎಂದ ರಾಹುಲ್ ಗಾಂಧಿ, ಮೈಸೂರು ಸ್ಯಾಂಡಲ್ ಸೋಪ್ ತಯಾರಿಸುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಲಿಮಿಟೆಡ್‌ನಲ್ಲಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಸಹಾಯಕ ಪ್ರಾಧ್ಯಾಪಕರು, ಸಹಾಯಕ ಎಂಜಿನಿಯರ್‌ಗಳ ನೇಮಕಾತಿಯಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳು ನಡೆದಿವೆ ಎಂದು ಹೇಳಿದರು.

ಮೈಸೂರು ಸ್ಯಾಂಡಲ್ ಹಗರಣದಲ್ಲಿ ಶಾಸಕರೊಬ್ಬರ ಪುತ್ರ 8 ಕೋಟಿ ಹಣದೊಂದಿಗೆ ಸಿಕ್ಕಿಬಿದ್ದಿದ್ದು, 2,500 ಕೋಟಿ ಕೊಟ್ಟು ಮುಖ್ಯಮಂತ್ರಿ ಸ್ಥಾನವನ್ನು ಖರೀದಿಸಬಹುದು ಎಂದು ಬಿಜೆಪಿ ಶಾಸಕರೊಬ್ಬರು ಹೇಳಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹೇಳಿದ್ದಾರೆ. ಇಲ್ಲಿ ಕರ್ನಾಟಕದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಆರು ವರ್ಷದ ಮಗುವಿಗೂ ಅರಿವಿದೆ ಎಂದು ಗಾಂಧಿ ಹೇಳಿದರು.

ಕಾಂಗ್ರೆಸ್ ತನ್ನನ್ನು 91 ಬಾರಿ ನಿಂದಿಸಿದೆ ಎಂದು ಪ್ರಧಾನಿ ಬಂದು ಹೇಳುತ್ತಾರೆ. ಆದರೆ ಭ್ರಷ್ಟಾಚಾರವನ್ನು ತಡೆಯಲು ಅವರು ಏನು ಮಾಡಿದರು, ಯಾವ ತನಿಖೆ ನಡೆಸಲಾಯಿತು ಮತ್ತು ಎಷ್ಟು ಜನರನ್ನು ಜೈಲಿಗೆ ಹಾಕಲಾಯಿತು ಎಂಬುದನ್ನು ಮೊದಲು ಕರ್ನಾಟಕಕ್ಕೆ ಹೇಳಲಿ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷರು ಆಗ್ರಹಿಸಿದರು.

SCROLL FOR NEXT